Advertisement

ರಸ್ತೆ ನಡುವಿನ ಗುಂಡಿಯಲ್ಲಿ ಗಿಡ ನೆಟ್ಟು ಪ್ರತಿಭಟನೆ

11:08 AM Oct 13, 2017 | Team Udayavani |

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಅನಾಹುತಕ್ಕೀಡಾದ ಹಲವು ಪ್ರದೇಶಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುರುವಾರ ಬಿಜೆಪಿ ನಾಯಕರಾದ ಜಗದೀಶ್‌ ಶೆಟ್ಟರ್‌, ಆರ್‌.ಅಶೋಕ್‌, ಕೆ.ಎಸ್‌. ಈಶ್ವರಪ್ಪ ಅವರೊಂದಿಗೆ ಮಳೆ ಅನಾಹುತ ಭಾಗಗಳಿಗೆ ಭೇಟಿ ನೀಡಿದರು. ಮೊದಲಿಗೆ ದಂಡು ರೈಲ್ವೆ ನಿಲ್ದಾಣದ ಬಳಿಯ ಅಂಡರ್‌ ಪಾಸ್‌ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡಿರುವುದು ವೀಕ್ಷಿಸಿದ ಅವರು, ರಸ್ತೆಗುಂಡಿಗಳಲ್ಲಿ ಗಿಡಗಳನ್ನು ನೆಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಂತರ ಶಿವಾಜಿನಗರದ ಟಸ್ಕರ್‌ಟೌನ್‌ ಪೊಲೀಸ್‌ ವಸತಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ತೊಂದರೆಗಳ ಕುರಿತು ಮಾಹಿತಿ ಪಡೆದರು. ಈ ವೇಳೆ ವಸತಿ ಕಟ್ಟಡಗಳನ್ನು ತೆರವುಗೊಳಿಸಿ ನೂತನ ಕಟ್ಟಡಗಳನ್ನು ನಿರ್ಮಿಸುವುದಾಗಿ ಅಧಿಕಾರಿಗಳು ತಿಳಿಸಿದ್ದು, ಮೊದಲು ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ಕಟ್ಟಡಗಳ ತೆರವು ಮಾಡಲಿ ಎಂದು ನಿವಾಸಿಗಳು ಮನವಿ ಮಾಡಿದರು. ಅದಕ್ಕೆ ಮಾಜಿ ಡಿಸಿಎಂ ಆರ್‌.ಅಶೋಕ್‌, ವಿಷಯವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು. 

ಬಳಿಕ ಶಿವಾಜಿನಗರ ಬಿಎಂಟಿಸಿ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಸೃಷ್ಟಿಯಾದ ರಸ್ತೆಗುಂಡಿಗಳ ಪರಿಶೀಲಿಸಿ, ಗುಂಡಿಗಳಿಗೆ ಬಣ್ಣದ ಪಟ್ಟಿ ಹಾಕಿ ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿದರು. ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರ ವಾಹನಗಳು ನಿಲ್ದಾಣದ ಬಳಿ ನಿಲ್ಲಿಸಿದರಿಂದ ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ನಿಲ್ದಾಣದಿಂದ ಬಸ್‌ಗಳು ಹೊರಲಾಗಲಿಲ್ಲ. ಇದರಿಂದ ನಿಲ್ದಾಣದ ಸುತ್ತಮುತ್ತಲಿನ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ನಂತರ ಹಲಸೂರು ಪೊಲೀಸ್‌ ಠಾಣೆ ಸಮೀಪ ಬ್ಲಾಕ್‌ಸ್ಪಾಟ್‌ ಪರಿಶೀಲಿಸಿ, ಠಾಣೆಯಿಂದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿದರು. ಈ ವೇಳೆ ರಸ್ತೆಯಲ್ಲಿನ ಗುಂಡಿಗಳಿಗೆ ಕಾರ್ಯಕರ್ತರು ಬಿಳಿ ಪಟ್ಟಿ ಹಾಕಿದರು. ಪರಿಣಾಮ ಎರಡು ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತು 

2 ನಿಮಿಷ ಪರಿಶೀಲನೆ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಜನರಿಗೆ ತೊಂದರೆಯಾದಾಗ ಯಾರು ಭೇಟಿ ನೀಡಲಿಲ್ಲ. ಈಗ ಭೇಟಿ ನೀಡಿದ್ದರಿಂದ ಆಗುವ ಪ್ರಯೋಜನವೇನು? ಎಂದು ಟಸ್ಕರ್‌ಟೌನ್‌ ನಿವಾಸಿಗಳು ದೂರಿದರು. ಯಡಿಯೂರಪ್ಪ ಅವರು ನಮ್ಮ ಏರಿಯಾಗೆ ಬಂದು ಕೇವಲ ಎರಡು ನಿಮಿಷ ಪರಿಶೀಲನೆ ನಡೆಸಿ ಹೊರಟುಹೋದರು. ನಿಜವಾಗಿಯೂ ಇಲ್ಲಿನ ಜನರು ಸಮಸ್ಯೆಗಳೇನು ಎಂಬುದನ್ನು ತಿಳಿದು ಪರಿಹಾರ ನೀಡುವ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಕೆಲ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

ಪೊಲೀಸ್‌ ವಸತಿ ಗೃಹ ಪ್ರದೇಶದಲ್ಲಿ ಕಾಲುವೆಗಳು ಹಾಳಾಗಿದ್ದು, ಸೊಳ್ಳೆಗಳ ಕಾಟ ಹೆಚ್ಚಿದೆ. ಆದರೆ, 19 ವರ್ಷಗಳಿಂದ ಒಮ್ಮೆಯೂ ಪಾಲಿಕೆ ಅಧಿಕಾರಿಗಳು ಈ ಕಡೆಗೆ ಬಂದಿಲ್ಲ. 
ಮಂಜುಳಾ ಸುರೇಶ್‌ಬಾಬು, ನಿವಾಸಿ

Advertisement

ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳು ಗುಂಡಿಮಯವಾಗಿದ್ದು, ಜನ ಸಾಯುವಂತಾಗಿದೆ. ಇಷ್ಟೆಲ್ಲ ಅನಾಹುತ ಸಂಭವಿಸಿದರೂ, ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. 
ಜಗದೀಶ್‌ ಶೆಟ್ಟರ್‌, ಮಾಜಿ ಮುಖ್ಯಮಂತಿ

Advertisement

Udayavani is now on Telegram. Click here to join our channel and stay updated with the latest news.

Next