ಕೊಪ್ಪಳ: ಅಕ್ಕಮಹಾದೇವಿ ವಿಶ್ವವಿದ್ಯಾಲಯವು ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದ್ದನ್ನು ಖಂಡಿಸಿ ಎಸ್ ಎಫ್‌ಐ ಜಿಲ್ಲಾ ಸಮಿತಿಯಿಂದ ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿ ಪ್ರಾಚಾರ್ಯರಿಗೆ ಮನವಿ ಸಲ್ಲಿಸಲಾಯಿತು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಅಕ್ಟೋಬರ್ ನವೆಂಬರ್ ನಡೆಯುವ ಪದವಿ ವಿದ್ಯಾರ್ಥಿನಿಯರ ಬಿಎ, ಬಿಕಾಂ, ಪ್ರಥಮ ತೃತೀಯ ಹಾಗೂ 5ನೇ ಸೆಮಿಸ್ಟರ್‌ನ ಪರೀಕ್ಷಾ ಶುಲ್ಕವನ್ನು 980 ರೂ. ನಿಗ ದಿ ಮಾಡಿದೆ. ಹಾಗೂ ಬಿಎಸ್ಸಿ ಪ್ರಥಮ, ತೃತೀಯ, 5ನೇ ಸೆಮಿಸ್ಟರ್ ವಿದ್ಯಾರ್ಥಿನಿಯರ ಶುಲ್ಕವನ್ನು 1050 ರೂ.ಗೆ ನಿಗ ದಿ ಮಾಡಿದೆ. ಇದು ಅತ್ಯಂತ ಖಂಡನೀಯ ಎಂದು ವಿದ್ಯಾರ್ಥಿ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಘಟಿಕೋತ್ಸವ ಶುಲ್ಕ 550 ರೂ. ನಿಗದಿ ಮಾಡಲಾಗಿದೆ. ಇದು ವಿದ್ಯಾರ್ಥಿನಿಯರ ವಿರೋಧಿ ನೀತಿಯಾಗಿದೆ. ಕೂಡಲೇ ವಿವಿಯು ನಿಗ ದಿ ಮಾಡಿದ ಶುಲ್ಕವನ್ನು ಕಡಿಮೆ ಮಾಡಬೇಕು. ಪರೀಕ್ಷೆ ಶುಲ್ಕವನ್ನು 120ರಿಂದ 150 ರೂ. ವರೆಗೆ ಇಳಿಸಬೇಕು. ಘಟಿಕೋತ್ಸವದ ಶುಲ್ಕವನ್ನು ಕಡ್ಡಾಯ ಮಾಡಬಾರದು. ಇಲ್ಲವೇ 200 ರೂ. ಮಾಡಬೇಕು. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಕಡಿಮೆ ಪರೀಕ್ಷಾ ಶುಲ್ಕ ಪಡೆಯಲಾಗುತ್ತದೆ. ಆದರೆ ಈ ವಿವಿಯಲ್ಲಿ ಶುಲ್ಕ ಹೆಚ್ಚಳ ಮಾಡಿದ್ದು ಸರಿಯಲ್ಲ ಎಂದು ಸಂಘಟನೆ ಮುಖಂಡರು ತಮ್ಮ ಅಸಮಾಧಾನ ಹೊರ ಹಾಕಿದರು.
ಸರ್ಕಾರ ಎಸ್ಸಿ, ಎಸ್‌ಟಿ ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೊಟ್ಟಿರುವ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಕೊಡುತ್ತದೆ. ಆದರೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸರಕಾರದ ನಿಯಮ ಉಲ್ಲಂಘನೆ ಮಾಡಿ ವಿದ್ಯಾರ್ಥಿನಿಯರಿಂದ ಸಂಪೂರ್ಣ ಶುಲ್ಕ ಪಡೆಯಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಕಾಲೇಜು ಮುಂದೆ ಪ್ರತಿಭಟನೆ ನಡೆಸಿ ಕಾಲೇಜು ಪ್ರಾಚಾರ್ಯರ ಮೂಲಕ ವಿವಿ ಕುಲಪತಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ವೇಳೆ ಸಂಘಟನೆ ಮುಖಂಡರಾದ ಸುಭಾನ್ ಸೈಯದ್, ಶಿವಕುಮಾರ್ ವಾಲಿಕಾರ,ಯಮನೂರಪ್ಪ ಎಚ್., ಶರಣಪ್ಪ ಹೋಮಿನಾಳ, ಕೃಷ್ಣ, ಗೌಸುಸಾಬ್, ಸೈಯದ್ ವಿದಾರ್ಥಿನಿಯರಾದ ಐಶ್ವರ್ಯ, ಸುಸ್ಮಿತಾ, ಮೇಘಾ, ದಿವ್ಯಾ, ನಂದಿನಿ, ಶೋಭಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.