Advertisement

Shah Rukh Khan: ಆನ್ಲೈನ್‌ ಗೇಮಿಂಗ್‌ ಪ್ರಚಾರ; ಶಾರುಖ್‌ ನಿವಾಸದ ಎದುರು ಪ್ರತಿಭಟನೆ

12:44 PM Aug 27, 2023 | Team Udayavani |

ಮುಂಬಯಿ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರನ್ನು ಮತ್ತೆ ಬಿಗ್‌ ಸ್ಕ್ರೀನ್‌ ನಲ್ಲಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ʼಜವಾನ್‌ʼ ಸಿನಿಮಾ ರಿಲೀಸ್‌ ಗೆ ದಿನಗಣನೆ ಆರಂಭವಾಗಿದೆ. ಆದರೆ ಈ ನಡುವೆ ಶಾರುಖ್‌ ಖಾನ್‌ ನಿವಾಸದ ಬಳಿ ಪ್ರತಿಭಟನೆ ನಡೆದಿದೆ.

Advertisement

ಶಾರುಖ್‌ ಖಾನ್‌ ಅವರ ʼಪಠಾಣ್‌ʼ ಸಿನಿಮಾಕ್ಕೆ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಬಾರಿಯೂ ಅವರ ಸಿನಿಮಾ ರಿಲೀಸ್‌ ಹತ್ತಿರವಾಗುತ್ತಿದ್ದಂತೆ ಪ್ರತಿಭಟನೆಗಳು ನಡೆದಿದೆ. ಆದರೆ ಈ ಬಾರಿ ಸಿನಿಮಾ ವಿಚಾರವಾಗಿ ಈ ಪ್ರತಿಭಟನೆ ನಡೆದಿಲ್ಲ. ಶಾರುಖ್ ಖಾನ್‌ ಅವರು ಕಾಣಿಸಿಕೊಂಡ ಆನ್ಲೈನ್‌ ಗೇಮಿಂಗ್‌ ಆ್ಯಪ್ಸ್ ನ ಜಾಹೀರಾತಿನ ವಿಚಾರಕ್ಕೆ ಪ್ರತಿಭಟನೆ ನಡೆದಿದೆ.

ಶಾರುಖ್‌ ಖಾನ್‌ ಕಳೆದ ಕೆಲ ಸಮಯದಿಂದ A23 ಎನ್ನುವ ಆನ್‌ಲೈನ್ ರಮ್ಮಿ ಪೋರ್ಟಲ್ ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಎ23 ಇತ್ತೀಚೆಗೆ ಶಾರುಖ್‌ ಅವರನ್ನು ಬ್ರಾಂಡ್ ಅಂಬಾಸಿಡರ್ ನ್ನಾಗಿ ಮಾಡಿದೆ.  ಇದರ ಪ್ರೋಮೋದಲ್ಲಿ ಶಾರುಖ್‌ “ಚಲೋ ಸಾಥ್ ಖೇಲೇ.”( ಬನ್ನಿ ಜೊತೆಯಾಗಿ ಆಡುವ) ಎಂದಿದ್ದಾರೆ.

ಇದೇ ವಿಚಾರವಾಗಿ ಅನ್‌ಟಚ್ ಯೂತ್ ಫೌಂಡೇಶನ್ ಶಾರುಖ್‌ ನಿವಾಸ ʼಮನ್ನತ್‌ʼ ಮುಂಭಾಗದಲ್ಲಿ ಶನಿವಾರ ಮಧ್ಯಾಹ್ನ(ಆ.26 ರಂದು ಪ್ರತಿಭಟನೆ ನಡೆಸಿದೆ. ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ಗಳು ಮತ್ತು ಜಂಗ್ಲೀ ರಮ್ಮಿ, ಜುಪೀ ಮತ್ತು ಇತರ ಪೋರ್ಟಲ್‌ಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಅನ್‌ಟಚ್ ಯೂತ್ ಫೌಂಡೇಶನ್ ಹೇಳಿದೆ.

“ಈ ಅಪ್ಲಿಕೇಶನ್‌ಗಳು ಯುವಕರನ್ನು ಭ್ರಷ್ಟರನ್ನಾಗಿ ಅವರ ದಾರಿಯನ್ನು ತಪ್ಪಿಸುತ್ತಿವೆ. ಪ್ರಸಿದ್ಧ ನಟ-ನಟಿಯರು ಈ ಜಾಹೀರಾತುಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರು ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅವರ ಮನ್ನತ್ ಬಂಗಲೆಯ ಹೊರಗೆ ಅನ್‌ಟಚ್ ಇಂಡಿಯಾ ಫೌಂಡೇಶನ್ ವತಿಯಿಂದ ಪ್ರತಿಭಟನೆ ನಡೆಯಲಿದೆ” ಎಂದು ಸಂಸ್ಥೆ ಹೇಳಿದೆ.

Advertisement

ಕೂಡಲೇ ಪೊಲೀಸರು ಶಾರುಖ್‌ ಅವರ ನಿವಾಸದತ್ತ ಧಾವಿಸಿ, ಪ್ರತಿಭಟನಾ ನಿರತ 4-5 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಿವಾಸದ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.

“ಹೊಸ ತಲೆಮಾರಿನವರು ಜಂಗ್ಲಿ ರಮ್ಮಿ ಆಡುವುದರಲ್ಲಿ ತೊಡಗಿದ್ದಾರೆ. ಯಾರಾದರೂ ಹೊರಗೆ ಜಂಗ್ಲೀ ರಮ್ಮಿ ಆಡುತ್ತಿದ್ದರೆ ಅಥವಾ ಜೂಜಾಡುತ್ತಿದ್ದರೆ, ಪೊಲೀಸರು ಅವರನ್ನು ಬಂಧಿಸುತ್ತಾರೆ, ಆದರೆ ಆನ್‌ಲೈನ್ ಆಟಗಳನ್ನು ಪ್ರಚಾರ ಮಾಡುವ ದೊಡ್ಡ ಬಾಲಿವುಡ್ ತಾರೆಗಳು ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಗಳಿಗೂ ಇದು ತಪ್ಪು ಎಂದು ಗೊತ್ತಿದ್ದರೂ ಹಣ ಪಡೆಯುತ್ತಿದ್ದಾರೆ. ಹಾಗಾಗಿ ಪ್ರಚಾರ ಮಾಡುತ್ತಿದ್ದಾರೆ. ನಾವು ಈ ಸ್ಟಾರ್‌ಗಳನ್ನು ಅವರ ಸಿನಿಮಾಗಳನ್ನು ನೋಡುವ ಮೂಲಕ ಮತ್ತು ಅವರಿಗಾಗಿ ನಮ್ಮ ಹಣವನ್ನು ಖರ್ಚು ಮಾಡುವ ಮೂಲಕ ಅವರನ್ನು ಪ್ರಸಿದ್ಧರನ್ನಾಗಿ ಮಾಡುತ್ತೇವೆ. ಈ ಜಾಹೀರಾತುಗಳನ್ನು ನಿಲ್ಲಿಸುವಂತೆ ನಾವು ಒತ್ತಾಯಿಸುತ್ತೇವೆ. ಈ ಅಪ್ಲಿಕೇಶನ್‌ಗಳು ಕಾನೂನುಬಾಹಿರವಾಗಿವೆ, ನಾವು ಅವುಗಳನ್ನು ಗೂಗಲ್ ನಲ್ಲಿ ಹುಡುಕಲು ಸಾಧ್ಯವಿಲ್ಲ, ಆದರೆ ಈ ಅಪ್ಲಿಕೇಶನ್‌ಗಳನ್ನು ಖಾಸಗಿ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ” ಎಂದು ಅನ್‌ಟಚ್ ಇಂಡಿಯಾ ಫೌಂಡೇಶನ್‌ನ ಅಧ್ಯಕ್ಷ ಕೃಷ್ಣ ಅಡಲ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next