ರಾಯಚೂರು: ಜಲಜೀವನ್ ಮಿಷನ್ ಎನ್ನುವುದು ಕುಡಿವ ನೀರನ್ನೂ ಮಾರಾಟ ಮಾಡುವ ಯೋಜನೆಯಂತಾಗಿದ್ದು, ಕೂಡಲೇ ಇದನ್ನು ರದ್ದುಪಡಿಸಿ ಗುತ್ತಿಗೆದಾರರ ಬಿಲ್ ತಡೆ ಹಿಡಿಯುವಂತೆ ಆಗ್ರಹಿಸಿ ಮಾ.15ರಂದು ಜಿಲ್ಲಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಪಿಐಎಂಎಲ್ ಮುಖಂಡ ಆರ್. ಮಾನಸಯ್ಯ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ-ಮನೆಗೆ ಗಂಗೆ ಎಂಬುದೆಲ್ಲ ಜನರ ದಾರಿ ತಪ್ಪಿಸುವ ಹುನ್ನಾರವಷ್ಟೇ. ಜನ ಕುಡಿವ ನೀರಿಗೂ ಹಣ ತೆರುವ ಸನ್ನಿವೇಶ ನಿರ್ಮಿಸಲಾಗಿದೆ. ರಾಜ್ಯದ 1.20 ಲಕ್ಷ ಕೋಟಿಯಾದರೆ, ಕೇಂದ್ರ ಸರ್ಕಾರದ 2.40 ಲಕ್ಷ ಕೋಟಿ ಮೊತ್ತದಲ್ಲಿ ಈ ಯೋಜನೆಗೆ ಹಣ ವಿನಿಯೋಗಿಸುತ್ತಿದೆ ಎಂದರು.
ಜಲಜೀವನ್ ಮಿಷನ್ ಯೋಜನೆ ರಾಯಚೂರು, ಯಾದಗಿರಿ, ಬೆಳಗಾವಿ, ರಾಮನಗರ, ಮೈಸೂರು ಹಾಗೂ ಚಾಮರಾಜನಗರ ಸೇರಿದಂತೆ ಒಟ್ಟು ಆರು ಜಿಲ್ಲೆಗಳಲ್ಲಿ ಈ ಯೋಜನೆ ಆರಂಭದ ಹಂತದಲ್ಲಿ 5 ಸಾವಿರ ಕೋಟಿ ಹಣ ಮಾರ್ಚ್ ಅಂತ್ಯದೊಳಗೆ ಖರ್ಚು ಮಾಡುವ ಉದ್ದೇಶ ಹೊಂದಿದೆ ಎಂದು ವಿವರಿಸಿದರು.
ರಾಯಚೂರು ಜಿಲ್ಲೆಯಲ್ಲಿ 83.480 ಮನೆಗಳಿಗೆ ಮೀಟರ್ ಅಳವಡಿಸಿ ನೀರು ಪೂರೈಕೆ ಹೆಸರಿನಲ್ಲಿ 313 ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, 307 ಕಾಮಗಾರಿಗಳಿಗೆ ಡಿಪಿಆರ್ ಸಿದ್ಧಪಡಿಸಲಾಗಿದೆ. ಗ್ರಾಮೀಣ ಸಿಸಿ ರಸ್ತೆಗಳನ್ನು ಕೊರೆದು ಅರ್ಧ ಇಂಚಿನ ಲೋಹದ ಪೈಪ್‌ಗ್ಳ ಅಳವಡಿಕೆ ಶೇ.80 ನಡೆದಿಲ್ಲ. ಆದರೆ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಇದೇ ಮಾರ್ಚ್‌ನಲ್ಲಿ ಶೇ.80 ಬಿಲ್ ಪಾವತಿಗೆ ಆದೇಶ ಮಾಡಿದ್ದಾರೆ. ಇದು ಸರ್ಕಾರದ ಭ್ರಷ್ಟಾಚಾರ ಬಹಿರಂಗವಾಗಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯೇ ದೊಡ್ಡ ಗುತ್ತಿಗೆದಾರ ಸಂಸ್ಥೆಯಾಗಿದೆ. ಕರ್ನಾಟಕ ಗ್ರಾಮೀಣ ಕುಡಿವ ನೀರು ಯೋಜನೆಗೆ ರವಿಶಂಕರ ಗುರೂಜಿ ಕಡೆಯಿಂದ ತಜ್ಞರ ತಂಡ ಉಸ್ತುವಾರಿ ವಹಿಸಿದೆ. ಅಂತರ್ಜಲ ಹೆಚ್ಚಳದ ಕಾಮಗಾರಿಗಳ ಗುತ್ತಿಗೆ ಗುರೂಜಿ ಮಾಡಿಸಿದ್ದಾರೆ ಎಂದು ದೂರಿದ ಅವರು, ಕೂಡಲೇ ಜೆಜೆಎಂ ಯೋಜನೆ ರದ್ದುಪಡಿಸಬೇಕು ಹಾಗೂ ಗುತ್ತಿಗೆದಾರರಿಗೆ ಹಣ ಪಾತಿಸಬಾರದು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಜಿ. ಅಮರೇಶ, ಪದಾಧಿಕಾರಿಗಳಾದ ರವಿದಾಸ್, ಶೇಖಹುಸೇನ್ ಭಾಷಾ, ಕರಿಮುಲ್ಲಾ ಇದ್ದರು.