Advertisement

ಸಾಲಮನ್ನಾಕ್ಕೆ ಒತ್ತಾಯಿಸಿ ಜು.10ರಂದು ಪ್ರತಿಭಟನೆ

01:22 PM Jun 12, 2017 | Team Udayavani |

ಮೈಸೂರು: ಬರ ಪರಿಸ್ಥಿತಿ ಹಿನ್ನೆಲೆ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಜು.10ರಂದು ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ರಾಜಾÂಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಳಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಎದುರಾಗಿರುವ ಬರಗಾಲದಿಂದಾಗಿ ರೈತರ ಬೆಳೆಗಳು ನಾಶವಾಗಿದ್ದು, ರಾಜ್ಯ ಸರ್ಕಾರ ಯಾವುದೇ ಪರಿಹಾರ ಸಹ ನೀಡಿಲ್ಲ. ಅಲ್ಲದೆ ರೈತರ ಸಾಲಮನ್ನಾ ಮಾಡುವ ವಿಷಯದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ತೋರುತ್ತಿಲ್ಲ.

ಈ ಹಿನ್ನೆಲೆ ಜು.7, 8 ಮತ್ತು 9 ರಂದು ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ಬಳಿಕ ಜು.10ರಂದು ಸಾಲಮನ್ನಾ ಮಾಡಿ, ಇಲ್ಲ ಅಧಿಕಾರ ಬಿಡಿ ಎಂಬ ಘೋಷಣೆಯೊಂದಿಗೆ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆಸಲಿದ್ದು, ಅಂದಾಜು 3 ರಿಂದ 4 ಲಕ್ಷ ಮಂದಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಯಾರಿಗೂ ಕೈ ಮುಗಿಯಲಿಲ್ಲ: ರಾಜ್ಯದಲ್ಲಿ ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡು ಬಾರಿ ರೈತರ ಸಾಲ ಮನ್ನಾ ಮಾಡಿದ್ದೆ. ಆದರೆ ಆ ಸಂದರ್ಭದಲ್ಲಿ ತಾವು ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ಗೆ ಕೈ ಮುಗಿದಿರಲಿಲ್ಲ. ಅದೇ ರೀತಿಯಲ್ಲಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲ ಮನ್ನಾ ಮಾಡಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಅವರು, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಸಹಕಾರಿ ಬ್ಯಾಂಕುಗಳ ಸಾಲಮನ್ನಾ ಆಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಸಾಲ ಮನ್ನಾ ಮಾಡಲಿ ಎಂದರು. 

ಸಾಲ ಮನ್ನಾ ಮಾಡುವ ವಿಷಯದಲ್ಲಿ ತಮಗೆ ಹಾಗೂ ಸಿದ್ದರಾಮಯ್ಯಗೆ ಯಾವ ಪ್ರತಿಷ್ಠೆಯೂ ಇಲ್ಲ. ಒಂದೊಮ್ಮೆ ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ್ದೇ ಆದಲ್ಲಿ ತಮ್ಮ ಹೋರಾಟವನ್ನು ಕೈಬಿಟ್ಟು, ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಅದರ ಪ್ರಶಂಸೆಗಳನ್ನು ಸಿದ್ದರಾಮಯ್ಯಗೆ ನೀಡುತ್ತೇನೆ. ರೈತರ ಸಾಲ ಮನ್ನಾ ಆಗುವುದಷ್ಟೆ ತಮಗೆ ಮುಖ್ಯವಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡುವ ಬಗ್ಗೆ ಸೂಕ್ತ ಸ್ಥಳದಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದರು. 

Advertisement

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಅವಧಿಯಲ್ಲಿ ಕೊಲೆ, ಸುಲಿಗೆ ಜತೆಗೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ 6521 ಕೊಲೆಗಳಾಗಿದ್ದು, 18,147 ಮಹಿಳೆಯರು ಹಾಗೂ 1235 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.

2887 ಮಹಿಳೆಯರು ಹಾಗೂ 2760 ಮಕ್ಕಳ ಮೇಲೆ ಅತ್ಯಾಚಾರ ನಡೆದಿದ್ದು, ಇದುವರೆಗೂ 1704 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ನಗರ ಗೂಂಡಾ ಸಿಟಿ ಆಗುತ್ತಿದೆ ಎಂದು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳುತ್ತಿದ್ದು, ನಾಲ್ಕು ವರ್ಷದ ನಂತರ ಸಿಎಂ ಕಣ್ತೆರೆದು ನೋಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಪಿಎಂ, ಎಂಪಿ ಪೋಟೋ ಹಾಕಿ: ಕೇಂದ್ರ ಸರ್ಕಾರ ಸ್ವತ್ಛ ಭಾರತ್‌ ಅಭಿಯಾನದಡಿ ರಾಜ್ಯಕ್ಕೆ ದೊಡ್ಡ ಪ್ರಮಾಣದ ಅನುದಾನ ನೀಡಿದ್ದು, ಕೇಂದ್ರ ಸರ್ಕಾರ ನೀಡಿರುವ 1966.44 ಕೋಟಿ ರೂ. ಅನುದಾನದಲ್ಲಿ 469 ಕೋಟಿ ರೂ. ಅನುದಾನ ಇಂದಿಗೂ ಬಳಕೆಯಾಗಿಲ್ಲ.

ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಮತ್ತು ಗೋಧಿ ಖರೀದಿಗೆ ಕೇಂದ್ರ ಸರ್ಕಾರವೇ ಹೆಚ್ಚಿನ ಅನುದಾನ ನೀಡುತ್ತಿದ್ದರೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ತಮ್ಮ ಯೋಜನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಜ್ಯದ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಿಗೆ ತೆರಳಿ ಪ್ರಧಾನಿ ಹಾಗೂ ಸಂಸದರ ಭಾವಚಿತ್ರಗಳನ್ನು ಹಾಕುವ ಜತೆಗೆ ಕರಪತ್ರಗಳನ್ನು ಹಂಚುವ ಮೂಲಕ ಜನರಿಗೆ ವಾಸ್ತವಾಂಶ ತಿಳಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದೇನೆ ಎಂದರು.

ಎಚ್‌ಡಿಕೆ ಹಿಟ್‌ ಆ್ಯಂಡ್‌ ರನ್‌: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರದು ಬರೀ ಹಿಟ್‌ ಅಂಡ್‌ ರನ್‌ ಕೇಸ್‌, ಹೀಗಾಗಿ ಕುಮಾರಸ್ವಾಮಿ ಅವರ ಯಾವುದೇ ಹೇಳಿಕೆಗಳಿಗೆ ಉತ್ತರ ನೀಡಬಾರದೆಂದು ತೀರ್ಮಾನಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಾಜಿ ಸಚಿವ ಎಸ್‌.ಎ.ರಾಮದಾಸ್‌, ಬಿ.ಜೆ.ಪುಟ್ಟಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ನಗರಾಧ್ಯಕ್ಷ ಡಾ.ಮಂಜುನಾಥ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next