ಕೊಪ್ಪಳ: ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ರೂ. ಗೌರವಧನ ಖಾತ್ರಿ ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜು. 10ರಿಂದ ರಾಜ್ಯಾದ್ಯಂತ ತಮ್ಮ ಕಾರ್ಯ ಸ್ಥಗಿತಗೊಳಿಸಿ ಮನೆಯಲ್ಲಿಯೇ ಅನಿರ್ದಿಷ್ಟ ಹೋರಾಟ ನಡೆಸಲಿದ್ದೇವೆ ಎಂದು ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಕೌಶಲ್ಯ ಗೌಡರ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12,000 ರೂ. ಸೇರಿದಂತೆ ಹಲವು ಬೇಡಿಕೆ ಕುರಿತು ಜನವರಿಯಲ್ಲೇ ಬೆಂಗಳೂರಿನಲ್ಲಿ ಹೋರಾಟ ಮಾಡಲಾಗಿತ್ತು. ಆಗ ಸರ್ಕಾರ ಹಾಗೂ ಸಚಿವರು ಬೇಡಿಕೆ ಈಡೇರಿಕೆ ಭರವಸೆ ನೀಡಿದ್ದರು. ಆದರೆ ಕೋವಿಡ್-19
ಹರಡಿದ ಸಂಬಂಧ ನಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮಗೆ ಎಲ್ಲೆಡೆ ಹೂವಿನ ಸುರಿಮಳೆ, ಚಪ್ಪಾಳೆ ತಟ್ಟಿ ಸನ್ಮಾನ ಮಾಡುತ್ತಿದ್ದಾರೆ. ಆದರೆ ಈ ಸನ್ಮಾನ, ಚಪ್ಪಾಳೆಯಿಂದ ಹೊಟ್ಟೆ ತುಂಬಲ್ಲ. ನಮ್ಮ ಬದುಕು ಸಹ ಕಷ್ಟದ ಸ್ಥಿತಿಯಲ್ಲಿದೆ. ಕೂಡಲೇ ನಮ್ಮ ಬೇಡಿಕೆ
ಈಡೇರಿಸಿ ಎಂದು ಒತ್ತಾಯಿಸಿದರು.
ಕಳೆದ ಜನವರಿ ತಿಂಗಳ ನಂತರ ಸರ್ಕಾರಕ್ಕೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದಕ್ಕೂ ಸ್ಪಂದನೆಯಿಲ್ಲ. ನಮ್ಮನ್ನು ಇಷ್ಟೊಂದು ಕೀಳಾಗಿ ನೋಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಜಿಲ್ಲೆಯ ಹಳ್ಳಿ ಹಳ್ಳಿಯಲ್ಲಿ ಆಶಾ ಕಾರ್ಯಕರ್ತೆಯರ ಸುತ್ತಾಟ ನಡೆಯುತ್ತದೆ. ಆದರೆ ಅವರಿಗೆ ಪ್ರತಿದಿನ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಮಾಸ್ಕ್, ಸ್ಯಾನಿಟೈಸರ್ ಪಡೆಯಬೇಕಿದೆ. ಕನಿಷ್ಟ ಒಂದು ವಾರಕ್ಕಾಗುವಷ್ಟು ಸಾಮಗ್ರಿ ಕೊಡುವಂತೆ ಮನವಿ ಮಾಡಿದರೂ ಆರೋಗ್ಯ ಇಲಾಖೆ ಸ್ಪಂದಿಸುತ್ತಿಲ್ಲ. ನಮ್ಮ ಬಳಿ ದಾಸ್ತಾನು ಕೊರತೆಯಿದೆ ಎಂದು ಹೇಳುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಮುಂದಿಟ್ಟು ಜು. 10ರಿಂದ ರಾಜ್ಯಾದ್ಯಂತ 42 ಸಾವಿರ ಆಶಾ ಕಾರ್ಯಕರ್ತೆಯರು ಕರ್ತವ್ಯ ಸ್ಥಗಿತ ಮಾಡಿ ಮನೆಯಿಂದಲೇ ಅನಿ ರ್ದಿಷ್ಟ ಹೋರಾಟಕ್ಕೆ ಕರೆ ನೀಡಿದ್ದಾರೆ ಎಂದರು.
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.