Advertisement

Hassan ಹಾಸನಾಂಬ ದೇಗುಲದ ಎದುರು ಶಾಸಕರ ಪ್ರತಿಭಟನೆ

12:24 AM Nov 05, 2023 | Team Udayavani |

ಹಾಸನ: ಜಿಲ್ಲಾಧಿಕಾರಿ ಅವರು ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ತಮ್ಮನ್ನು ಕಡೆಗಣಿಸಿ ದ್ದಾರೆಂದು ಸ್ಥಳೀಯ ಶಾಸಕ ಸ್ವರೂಪ್‌ ಪ್ರಕಾಶ್‌ ಅವರು ಜೆಡಿಎಸ್‌ ನಗರಸಭಾ ಸದಸ್ಯರೊಂದಿಗೆ ಹಾಸನಾಂಬ ದೇಗುಲದ ಪ್ರವೇಶ ದ್ವಾರದ ಸಮೀಪವೇ ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಬೆಳಗ್ಗೆ 9 ಗಂಟೆ ವೇಳೆಗೆ ದೇಗುಲದ ಬಳಿ ಬಂದ ಸ್ವರೂಪ್‌ ಅವರು, ದೇವಾಲಯದ ಪ್ರವೇಶ ದ್ವಾರದ ಬಳಿಗೆ ಜಿಲ್ಲಾಧಿಕಾರಿಯವರನ್ನು ಕರೆಸಿ ದೇವಾಲಯದ ಕಳಸ ಪುನರ್‌ ಪ್ರತಿಷ್ಠಾಪನೆ ಮತ್ತು ಆ ಸಂಬಂಧ ನಡೆದ ಹೋಮ-ಹವನ ಪೂಜೆಗೆ ಸ್ಥಳೀಯ ಶಾಸಕನಾದ ನನ್ನನ್ನು ಯಾಕೆ ಕರೆದಿಲ್ಲ? ಮುಜರಾಯಿ ಕಾಯ್ದೆ ಪ್ರಕಾರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷನಾದ ನನ್ನ ಗಮನಕ್ಕೂ ತರದೆ ನನ್ನನ್ನು ಆಹ್ವಾನಿಸದೆ ಹೇಗೆ ಪೂಜೆ ಮಾಡಿದಿರಿ? ನಿಮ್ಮ ಪತಿಯೊಂದಿಗೆ ಸೇರಿ ಕಳಶ ಪ್ರತಿಷ್ಠಾಪನೆ, ಹೋಮ ಮಾಡಿದ್ದು ಸರಿಯೇ? ದೇವಾಲಯ ನಿಮ್ಮ ವೈಯಕ್ತಿಕ ಆಸ್ತಿಯೇ ಎಂದು ತರಾಟೆಗೆ ತೆಗೆದುಕೊಂಡರು.

ದೇವಾಲಯದ ಕಳಶ ಪ್ರತಿಷ್ಠಾಪನೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯಬೇಕು. ಆದರೆ ಏಳೆಂಟು ವರ್ಷಗಳ ಅಂತರದಲ್ಲಿ ಮತ್ತೆ ಪ್ರತಿಷ್ಠಾಪನೆ ಮಾಡಲಾಗಿದೆ. ಇದು ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದೀರಿ. ದೇವಾಲಯದ ಕಳಸ ಪ್ರತಿಷ್ಠಾಪನೆಗೆ ಶೃಂಗೇರಿ ಗುರುಗಳನ್ನು ಆಹ್ವಾನಿಸಬೇಕಾಗಿತ್ತು. ಈ ಸಂಬಂಧ ಒಮ್ಮೆಯೂ ನನ್ನೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ನಡೆದು ಕೊಂಡಿದ್ದೀರಿ ಎಂದು ದೂರಿದರು.

ಕಳಶ‌ ಪ್ರತಿಷ್ಠಾಪನೆಗೆ ಮುಜರಾಯಿ ತಹಶೀಲ್ದಾರ್‌ ನಿಮಗೆ ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿ ಸಮರ್ಥನೆ ನೀಡಲು ಮುಂದಾದರು. ಧಾರ್ಮಿಕ ದತ್ತಿ ಇಲಾಖೆ ಆಗಮ ಪಂಡಿತರು ಹೇಳಿದಂತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದಾಗ ಅದನ್ನು ಒಪ್ಪದ ಶಾಸಕ ಸ್ವರೂಪ್‌, ಕಳಸ ಪ್ರತಿಷ್ಠಾಪನೆಯನ್ನು ಶಾಸ್ತ್ರೋಕ್ತವಾಗಿ ಮಾಡಬೇಕು. ಶೃಂಗೇರಿ ಶ್ರೀಗಳನ್ನು ಕರೆಸಿ ಮಾಡಬೇಕು ಎಂದು ತಮ್ಮ ತಂದೆ ಎಚ್‌.ಎಸ್‌. ಪ್ರಕಾಶ್‌ ಅವರ ಕಾಲದಲ್ಲಿ ನಡೆದಿದ್ದ ಕಳಸ ಪ್ರತಿಷ್ಠಾಪನೆಯ ಚಿತ್ರಗಳ ಆಲ್ಬಂ ಪ್ರದರ್ಶಿಸಿದರು.

ಸ್ಥಳಕ್ಕೆ ಬಂದ ಮುಜರಾಯಿ ತಹಶೀಲ್ದಾರ್‌ ನಿರುತ್ತರರಾಗಿ ನಿಂತರು. ಉಪ ವಿಭಾಗಾಧಿಕಾರಿಯರು ಸ್ಥಳಕ್ಕೆ ಬಂದು ನಿಮ್ಮ ಪಿಎಗೆ ಫೋನ್‌ ಮಾಡಿದ್ದೆ . ಕರೆ ಸ್ವೀಕರಿಸಲಿಲ್ಲ ಎಂದು ಸ್ಪಷ್ಟಪಡಿಸಲು ಮುಂದಾದರು. ಅಪರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಮ್ಮಯ್ಯ ಏನೋ ತಪ್ಪಾಗಿದೆ ಬಿಟ್ಟುಬಿಡಿ ಎಂದು ಸಮಾಧಾನ ಪಡಿಸಲು ಯತ್ನಿಸಿದರು. ಶಾಸಕರ ಪ್ರತಿಭಟನೆಗೆ ಜೆಡಿಎಸ್‌ ಮುಖಂಡರು, ನಗರಸಭೆ ಜೆಡಿಎಸ್‌ ಸದಸ್ಯರು ಸಾಥ್‌ ನೀಡಿದರು. ಈ ಬಾರಿ ಹಾಸ ನಾಂಬ ಉತ್ಸವ ಆಗಿಲ್ಲ, ಸತ್ಯಭಾಮ ಉತ್ಸವ ಆಗಿದೆ. ಅಧಿಕಾರಿಗಳು ಹಾಸನಾಂಬ ದೇವಾಲಯ ವನ್ನೇ ಆಸ್ತಿ ಮಾಡಿಕೊಂಡಿದ್ದಾರೆ ಎಂದು ನಗರಸಭೆ ಸದಸ್ಯರು, ಬಿಜೆಪಿ ಸದಸ್ಯರು, ಜೆಡಿಎಸ್‌ ಮುಖಂಡರು ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ಹೊರ ಹಾಕಿದರು.

Advertisement

ಸಮರ್ಪಕ ಉತ್ತರ ನೀಡದೆ ದೇಗುಲಕ್ಕೆ ವಾಪಸಾದ ಜಿಲ್ಲಾಧಿಕಾರಿ ವಿರುದ್ಧ ಜೆಡಿಎಸ್‌ ಮುಖಂಡರು, ನಗರಸಭೆ ಸದಸ್ಯರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next