ಚಿಕ್ಕಮಗಳೂರು: ಸ್ನೇಹಿತನ ತಂಗಿಗೆ ದೂರವಾಣಿ ಸಂದೇಶಗಳನ್ನು ಕಳಿಸುತ್ತಿದ್ದ ಯುವಕನಿಗೆ ಎಚ್ಚರಿಸಲು ಮುಂದಾಗಿದ್ದ ಸಂದರ್ಭದಲ್ಲಿ ಯುವಕರ ನಡುವೆ ಮಾರಾಮಾರಿ ನಡೆದು ಯುವಕನೋರ್ವ ಮೃತಪಟ್ಟ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ನಡೆಸಿದ ದಿಢೀರ್ ಪ್ರತಿಭಟನೆಯಿಂದ ನಗರದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಘಟನೆ ಶುಕ್ರವಾರ ನಗರದಲ್ಲಿ ನಡೆಯಿತು.
ಅಫನಾನ್ ತಂಗಿಗೆ ದೂರವಾಣಿ ಸಂದೇಶಗಳನ್ನು ಕಳಿಸುತ್ತಿದ್ದ ಫರೀದ್ ಎಂಬ ಯುವಕನಿಗೆ ಎಚ್ಚರಿಸಲು ಬುಧವಾರ ರಾತ್ರಿ ನಿಹಾಲ್, ಮನೋಜ್, ಹನೀಫ್, ಅಫನಾನ್, ರಜಾಕ್ ಸ್ನೇಹಿತರ ತಂಡ ಮುಂದಾಗಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಫರೀದ್ ಜೊತೆಗಿದ್ದ ಸಲೀಂ, ತೌಫೀಕ್, ಫರಾನ್ ಯುವಕರ ತಂಡ ಮತ್ತು ಮನೋಜ್ ಇದ್ದ ಯುವಕರ ತಂಡದ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.
ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಗಲಾಟೆಯಲ್ಲಿ ಮನೋಜ್ ತಲೆಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಲಾಗಿದೆ. ತಲೆಗೆ ಬಲವಾದ ಪೆಟ್ಟು ಬಿದಿದ್ದ ಮನೋಜ್‌ನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲೆಯ ಆಸ್ಪತ್ರೆಗೆ ರವಾನಿಸಲಾಗಿದೆ. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಬೆಂಗಳೂರಿಗೆ ಕರೆದೊಯ್ಯವಂತೆ ವೈದ್ಯರು ಸಲಹೆ ನೀಡಿ ದ್ದು, ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮನೋಜ್ ಮೃತಪಟ್ಟಿದ್ದಾನೆ.
ಮೃತದೇಹವನ್ನು ಗುರುವಾರ ರಾತ್ರಿ ಮರಳಿ ನಗರದ ಸರ್ಕಾರಿ ಆಸ್ಪತ್ರೆಗೆ ತರಲಾಯಿತು. ಹಲ್ಲೆಯಿಂದ ಯುವಕ ಮೃತಪಟ್ಟಿರುವ ವಿಚಾರ ಕಾಡ್ಗಿಚ್ಚಿನಂತೆ ನಗರಾದ್ಯಂತ ಹಬ್ಬುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ತಂಡೋಪ ತಂಡವಾಗಿ ನಗರದ ಸರ್ಕಾರಿ ಆಸ್ಪತ್ರೆಯ ಶವಗಾರದ ಬಳಿ ಜಮಾಯಿಸಿದರು.
ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಶವಾಗಾರದ ಮುಂಭಾಗ ಪ್ರತಿಭಟನೆ ನಡೆಸಿದ ಬಳಿಕ ಅಲ್ಲಿಂದ ಆಜಾದ್ ವೃತ್ತಕ್ಕೆ ಆಗಮಿಸಿ ತಪ್ಪಿತಸ್ಥರನ್ನು ಬಂಧಿಸಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರು ಎಂ.ಜಿ. ರಸ್ತೆಯಲ್ಲಿ ತೆರಳಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಎಂ.ಜಿ. ರಸ್ತೆಯ ಕನ್ನಿಕಾ ಪರಮೇಶ್ವರ ದೇವಾಲಯದ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ಸಂದರ್ಭದಲ್ಲಿ ಬಿಜೆಪಿ ಮುಖಂಡ ದೇವರಾಜ್ ಶೆಟ್ಟಿ ಅವರಿಗೆ ಬೆಂಕಿ ತಗುಲಿದ ಘಟನೆಯೂ ನಡೆಯಿತು. ಅಲ್ಲಿಂದ ಮುಂದೆ ಸಾಗಿದ ಪ್ರತಿಭಟನಕಾರರು ಅಂಡೇಛತ್ರದ ಬಳಿ ಅನ್ಯಕೋಮಿನ ಅಂಗಡಿ ಮುಚ್ಚಿಸುವಂತೆ ಪಟ್ಟು ಹಿಡಿದು ರಸ್ತೆಯಲ್ಲೇ ಕುಳಿತರು. ಹನುಮಂತಪ್ಪ ವೃತ್ತದಲ್ಲಿ ಸಮಾವೇಶಗೊಂಡ ಹಿಂದೂಪರ ಸಂಘಟನೆ ಕಾರ್ಯಕರ್ತರು ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥರನ್ನು ಶೀಘ್ರವೇ ಬಂಧಿ ಸಬೇಕೆಂದು ಆಗ್ರಹಿಸಿದರು.