Advertisement

‘ಕರಾಳ ದಿನ’ಆಚರಿಸಿದ ರೈತರ ಬಂಧನ-ಬಿಡುಗಡೆ 

04:26 PM Nov 02, 2018 | Team Udayavani |

ಹಾವೇರಿ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ರಾಜ್ಯೋತ್ಸವ ದಿನವನ್ನು ‘ಕರಾಳ ದಿನ’ವನ್ನಾಗಿ ಆಚರಿಸುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ ಘಟನೆ ಗುರುವಾರ ನಗರದಲ್ಲಿ ನಡೆಯಿತು. ನಗರದ ಹೊಸ್ಮನಿ ಸಿದ್ದಪ್ಪ ವೃತ್ತದ ರೈತ ಹುತಾತ್ಮ ಸ್ಮಾರಕದ ಬಳಿ ರೈತರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ವಿವಿಧ ಧರಣಿ ನಡೆಸುತ್ತಿದ್ದರು. ಸ್ಥಳಕ್ಕೆ ಉಸ್ತುವಾರಿ ಸಚಿವರು ಅಥವಾ ಜಿಲ್ಲಾ ಧಿಕಾರಿಗಳು ಬಂದು ಮನವಿ ಸ್ವೀಕರಿಸುವಂತೆ ಪಟ್ಟು ಹಿಡಿದರು. ಆದರೆ, ಅವರು ಬರಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸರು ತಿಳಿಸಿದರೂ ಪಟ್ಟು ಸಡಿಲಿಸದೇ ಪ್ರತಿಭಟನೆ ಮುಂದುವರಿಸಿದಾಗ, ಪೊಲೀಸರು 30ಕ್ಕೂ ಹೆಚ್ಚು ರೈತರನ್ನು ಬಂಧಿಸಿದರು. ಬಳಿಕ ಶಹರ ಪೊಲೀಸ್‌ ಠಾಣೆಯಲ್ಲಿ ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದರು.

Advertisement

ಬಂಧನಕ್ಕೂ ಮುನ್ನ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಹನುಮಂತಪ್ಪ ದಿವಿಗಿಹಳ್ಳಿ, ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಗೊಂಡು ಆರು ತಿಂಗಳು ಕಳೆದರೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರ ಉತ್ತರ ಕರ್ನಾಟಕ ಹಾಗೂ ಈ ಭಾಗದ ರೈತರ ಬೇಡಿಕೆಗಳನ್ನು ಕಡೆಗಣಿಸುವ ಮೂಲಕ ಮಲತಾಯಿ ಧೋರಣೆ ತೋರಲಾಗಿದೆ. ಸರ್ಕಾರ ರಚನೆಗೊಂಡ ಸಂದರ್ಭದಲ್ಲಿ ಮುಖ್ಯಂತ್ರಿಗಳು ತಿಂಗಳಿಗೊಮ್ಮೆ ರೈತರ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೆ ಒಂದೇ ಒಂದು ಬಾರಿಯೂ ಸಭೆ ಕರೆದು ಚರ್ಚಿಸಿಲ್ಲ. ಸಮ್ಮಿಶ್ರ ಸರ್ಕಾರ ಕೇವಲ ದಕ್ಷಿಣ ಕರ್ನಾಟಕದ 4 ಜಿಲ್ಲೆಗಳಿಗೆ ಮಾತ್ರ ಸೀಮಿತಗೊಂಡಿದೆ. ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಈ ಭಾಗದ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೂಡಲೇ ರೈತರ ಸಭೆ ಕರೆದು ಚರ್ಚಿಸಬೇಕು. ಇಲ್ಲದಿದ್ದರೆ ಮುಂಬರುವ ಚಳಿಗಾಲದ ಅ ವೇಶನದ ಸಂದರ್ಭದಲ್ಲಿ ಬೆಳಗಾವಿಯ ಸುವರ್ಣಸೌಧಕ್ಕೆ 10 ಸಾವಿರಕ್ಕೂ ಹೆಚ್ಚು ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ ಪ್ರಮುಖ ಬೆಳೆಯಾದ ಮೆಕ್ಕೆಜೋಳ ಕಟಾವಿಗೆ ಬಂದಿದ್ದು ಕನಿಷ್ಟ ಬೆಂಬಲ ಬೆಲೆ ದರದಲ್ಲಿ ಮೆಕ್ಕೆಜೋಳವನ್ನು ಖರೀದಿಸಬೇಕು. ಇದಕ್ಕಾಗಿ ತಾಲೂಕಿಗೊಂದು ಖರೀದಿ ಕೇಂದ್ರ ತೆರೆಯಬೇಕು. ಕೇಂದ್ರ ಸರ್ಕಾರ ಘೋಷಿಸಿದಂತೆ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ 1700 ರೂ. ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನ 200 ರೂ. ಸೇರಿ ಒಟ್ಟು ಕ್ವಿಂಟಲ್‌ ಗೆ 1900 ರೂ. ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಬಗರ್‌ ಹುಕುಂ ಸಾಗುವಳಿದಾರರಿಗೆ ಭೂಮಿಯ ಹಕ್ಕು ಪತ್ರ ನೀಡಲು ಅಕ್ರಮ ಸಕ್ರಮ ಸಮಿತಿ ಶೀಘ್ರವೇ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ, ತಾಲೂಕಾಧ್ಯಕ್ಷ ಫಕ್ಕೀರಗೌಡ ಗಾಜೀಗೌಡ್ರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಸಹ ಜಿಲ್ಲೆಗೆ ಸರಿಯಾಗಿ ಭೇಟಿ ಕೊಡುತ್ತಿಲ್ಲ. ಜಿಲ್ಲೆಯ ಸಮಸ್ಯೆಗಳನ್ನು ಸರ್ಕಾರದ ಗಮನಸೆಳೆಯುವ ಕೆಲಸ ಆಗುತ್ತಿಲ್ಲ ಎಂದು ಆರೋಪಿಸಿದರು. ರೈತ ಮುಖಂಡರಾದ ಫಕ್ಕೀರೇಶ ಕಾಳಿ, ಜಗದೀಶ ಕೂಸಗೂರ, ಹೊನ್ನಪ್ಪ ಸಣ್ಣಬಾರ್ಕಿ, ರಾಮನಗೌಡ ತರ್ಲಘಟ್ಟ, ನಾಗರಾಜ ರಾಮಜ್ಜನವರ ಸೇರಿದಂತೆ ನೂರಾರು ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next