ಕುಂದಗೋಳ: ಪಟ್ಟಣದಲ್ಲಿ ಟಿಪ್ಪು ಸ್ಮಾರಕ ಉದ್ಘಾಟನೆಗೆ ಅವಕಾಶ ನೀಡುವುದಿಲ್ಲ ಎಂದು ಹಿರೇಮಠದಿಂದ ಭೂತೇಶ್ವರ ದೇವಸ್ಥಾನದ ವರೆಗೆ ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ರವಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾ ಸ್ಥಳಕ್ಕೆ ಎಸಿ ಮಹೇಶ ಕರ್ಜಗಿ ಹಾಗೂ ಡಿಎಸ್‌ಪಿ ಬಿ.ಪಿ. ಚಂದ್ರಶೇಕರ, ತಹಶೀಲ್ದಾರ್ ನವೀನ ಹುಲ್ಲೂರ, ಪಪಂ ಮುಖ್ಯಾಧಿಕಾರಿ ಎಸ್.ಎಸ್. ಇಬ್ರಂಡಿ ಆಗಮಿಸಿ ಪ್ರತಿಭಟನಾಕಾರರ ಜೊತೆಗೆ ಮಾತುಕತೆಗೆ ಮುಂದಾದರು.
ಆದರೆ, ಜನರ ಗಲಾಟೆ ಹೆಚ್ಚಾದ್ದರಿಂದ ಅಧಿಕಾರಿಗಳು ಮುಖಂಡರೊಂದಿಗೆ ದೇವಾಲಯದ ಕೋಣೆ ಸೇರಿ ಸಭೆ ನಡೆಸಿದರು. ಇದರಿಂದ ರೊಚ್ಚಿಗೆದ್ದ ಜನರು ಜೈಘೋಷ ಕೂಗುತ್ತ ಸ್ಮಾರಕದ ಕಡೆ ತೆರಳಲು ಅಣಿಯಾದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಶ್ರೀಗಳು ದೇವಸ್ಥಾನದಿಂದ ಹೊರ ಬಂದು ಮಾತನಾಡಿ, ಅಧಿಕಾರಿಗಳೊಂದಿಗೆ ಸಮಾಲೋಚಿಸುತ್ತಿದ್ದು, ಭಾವೋದ್ವೇಗಗೊಳ್ಳದೆ ಸ್ವಲ್ಪ ಕಾಯಿರಿ.
ಮಾತುಕತೆ ನಂತರ ಮುಂದಿನ ಹೆಜ್ಜೆ ಇಡೋಣ ಎಂದು ಜನರನ್ನು ಶಾಂತಗೊಳಿಸಿದರು. ಸಭೆಯ ನಂತರ ಜನರನ್ನುದ್ದೇಶಿಸಿ ಎಸಿ ಮಹೇಶ ಕರ್ಜಗಿ ಮಾತನಾಡಿ, ಸ್ಮಾರಕ ಉದ್ಘಾಟನೆಗೆ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೆ ಮುಂದಾಗಿರುವುದು ಕಂಡುಬಂದಿದೆ.
ಈ ಕುರಿತು ಪಪಂ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಸ್ಮಾರಕ ಉದ್ಘಾಟನೆಗೊಳ್ಳದಂತೆ ಮುಂಬಾಲಿಗೆ ಬೀಗ ಹಾಕಿ ಬಂದೋಬಸ್ತ್ ಮಾಡಲಾಗಿದೆ. ಟಿಪ್ಪು ಉತ್ಸವ ಮಾಡಲು ಅವಕಾಶ ನೀಡಲಾಗಿದೆ. ಯಾರೂ ಕಾನೂನು ಬಾಹಿರವಾಗಿ ಮುಂದುವರಿಯ ಬಾರದು ಎಂದು ಹೇಳಿದರು. ಪರಿಸ್ಥಿತಿ ತಿಳಿಗೊಂಡಿತು. ಪ್ರತಿಭಟನಾಕಾರರು ಎಸಿಗೆ ಮನವಿ ನೀಡಿದರು.
ಪಟ್ಟಣದಲ್ಲಿ ರವಿವಾರ ಬೆಳಗಿನಿಂದಲೆ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವುದು ಕಂಡುಬಂತು. ಯಾವುದೇ ಅಹಿತಕರ ಘಟನೆಯಾಗದಂತೆ ಪೊಲೀಸ್ ಇಲಾಖೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿತ್ತು. ಡಿಎಸ್ಪಿ, 6 ಜನ ಪಿಎಸ್‌ಐ, 15 ಎಎಸ್‌ಐ, 4 ಡಿಆರ್ ತುಕಡಿ, 2 ಕೆಎಸ್‌ಆರ್‌ಪಿ, 100 ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದರು.