ಆಳಂದ: ರೈತರು ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ತಾಲೂಕಿನ 11 ಗ್ರಾಮ ಪಂಚಾಯತಿ ಕಚೇರಿಗಳ ಎದುರು ಸೋಮವಾರ ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ಸು ಪಡೆಯಬೇಕು. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿಚಾರ ಕೈಬಿಡಬೇಕು. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಸುವುದನ್ನು ಮುಂದುವರಿಸಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ 2020 ವಾಪಸ್ಸು ಮತ್ತು ಬೀಜೋತ್ಪಾದನೆ ಕಾಯ್ದೆಯನ್ನು ಹಿಂದಕ್ಕೆ ಪಡೆಯಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಒತ್ತಾಯಿಸಲಿ ಎಂದು ಆಗ್ರಹಿಸಿದರು.
ಕೃಷಿ ಯೋಗ್ಯವಾದ ಮರಗಳಿಲ್ಲದ ಅರಣ್ಯ ಭೂಮಿ ಸಾಗುವಳಿಯನ್ನು ಸಕ್ರಮಗೊಳಿಸುವ, ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಅರಣ್ಯಕ್ಕೆ ವಹಿಸಬೇಕು ಎಂದು ಒತ್ತಾಯಿಸಿದರು. ಕೃಷಿ ಕೂಲಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಬೇಕು. ಉದ್ಯೋಗ ಖಾತ್ರಿ ಕಾರ್ಮಿಕರಿಗೆ ವರ್ಷಕ್ಕೆ ತಲಾ 200 ದಿನಗಳ, ದಿನಕ್ಕೆ 600 ರೂ. ಕೂಲಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಡಾ| ಸ್ವಾಮಿನಾಥನ್ ವರದಿಯನ್ನು ಕೇಂದ್ರ ಸರ್ಕಾರ ಕೂಡಲೇ ಅಂಗೀಕರಿಸಬೇಕು. ಎಲ್ಲ ರೈತರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ಮತ್ತು ಗ್ರಾಮೀಣ ಕಸಬುದಾರರಿಗೆ ಖಾಸಗಿ, ಸರ್ಕಾರಿ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಲಾಕ್‌ಡೌನ್ ಅವಧಿಯಲ್ಲಿನ ಎಲ್ಲ ಕಾರ್ಮಿಕರಿಗೆ ಪ್ರತಿ ತಿಂಗಳು 10 ಸಾವಿರ ರೂ. ಹಾಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಮೊತ್ತವನ್ನು ಕನಿಷ್ಠ 18 ಸಾವಿರಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು. ತಡೋಳಾ ಗ್ರಾ.ಪಂ ಎದುರು ನಡೆದ ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡ ಸಚಿನ್ ಜಿ. ಸೂರ್ಯವಂಶಿ, ತುಕಾರಾಮ ನಕಾತೆ, ಕಮಲೇಶ ಅವುಟೆ, ಗಜಾನಂದ ಅವುಟೆ, ಜೈಭೀಮ ಗಾಯಕವಾಡ, ಆಸಾಕ್ ಮುಲ್ಲಾ ಪಾಲ್ಗೊಂಡಿದ್ದರು.
ಪ್ರತಿಭಟನೆ ಮೂರು ಹಂತಗಳಲ್ಲಿ ನಡೆಯಲಿದೆ. ಸೋಮವಾರದಂದು ಹಿರೋಳಿ, ಸರಸಂಬಾ, ಪಡಸಾವಳಿ, ಭೂಸನೂರ, ಧಂಗಾಪುರ, ತಡೋಳಾ, ಆಳಂಗಾ ಸೇರಿ 11 ಗ್ರಾ.ಪಂಗಳ ಎದುರು ಏಕಕಾಲಕ್ಕೆ ಪ್ರತಿಭಟಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗಿದೆ. ಇನ್ನುಳಿದ ಗ್ರಾ.ಪಂಗಳ ಎದುರು ಮಂಗಳವಾರ ಹಾಗೂ ಬುಧವಾರ ಪ್ರತಿಭಟನೆ ನಡೆಯಲಿದೆ. –
ಮೌಲಾ ಮುಲ್ಲಾ, ಕಿಸಾನ್ ಸಭಾ ಜಿಲ್ಲಾ ಅಧ್ಯಕ್ಷ