ನೆಲ್ಯಾಡಿ: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿ ರಸ್ತೆಯಲ್ಲಿ ಲಘು ವಾಹನ ಹೊರತುಪಡಿಸಿ ಘನ ವಾಹನ ಸಂಚಾರಕ್ಕೆ ಹೇರಲಾಗಿರುವ ನಿಷೇಧವನ್ನು ಹಿಂಪಡೆಯಬೇಕು ಕನಿಷ್ಠ ಬಸ್ ಮತ್ತು 6 ಚಕ್ರದ ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿ ಗುಂಡ್ಯ ಪೇಟೆಯಲ್ಲಿ ಶನಿವಾರ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಹಾಗೂ ಹಲವು ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು.
ವೇದಿಕೆ ಆಶ್ರಯದಲ್ಲಿ ಸೇರಿದ ಪ್ರತಿಭಟನಕಾರರು ಕಳೆದ 9 ತಿಂಗಳಿನಿಂದ ನಾನಾ ಕಾರಣಗಳನ್ನು ಮುಂದಿಟ್ಟು ಶಿರಾಡಿ ಘಾಟಿ ರಸ್ತೆಯನ್ನು ಮುಚ್ಚಲಾಗಿದೆ. ಇದರಿಂದಾಗಿ ದ.ಕ. ಜಿಲ್ಲೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆಗೆ
ಧಕ್ಕೆ ಉಂಟಾಗಿದೆ. ಆದ ಕಾರಣ ತತ್‌ಕ್ಷಣದಿಂದಲೇ ರಸ್ತೆಯಲ್ಲಿ ಕನಿಷ್ಠ ಬಸ್ ಮತ್ತು 6 ಚಕ್ರದ ಲಾರಿಗಳ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ ಗುಡ್ಡ ಕುಸಿತ ನೆಪ ಒಡ್ಡಿ ಘನ ವಾಹನ ಸಂಚಾರಕ್ಕೆ ಅವಕಾಶ ನೀಡದೆ ನಿಷೇಧ ಹೇರಲಾಗಿದೆ. ಗುಡ್ಡ ಕುಸಿತ ಆಗಿರುವ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಸರಿಪಡಿಸಲಾಗಿದೆ, ಸಕಲೇಶಪುರ ವ್ಯಾಪ್ತಿಯಲ್ಲಿ ಬಾಕಿ ಇದ್ದು, ಅದನ್ನು ಸರಿಪಡಿಸದೆ ವಾಹನ ಸಾಗಲು ಬಿಡಲಾಗಿದೆ. ಬಸ್ ಸಂಚಾರ ಮಾಡಬಹುದು ಎನ್ನುವ ಬಗ್ಗೆ ಹೆದ್ದಾರಿ ಇಲಾಖೆಯವರು ತಿಳಿಸಿರುತ್ತಾರೆ. ಇಲ್ಲಿ ಉದ್ದೇಶಪೂರ್ವಕವಾಗಿ ಬಂದ್ ಮಾಡಲಾಗಿದೆ. ತತ್‌ಕ್ಷಣ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಕ್ರಮಕೈಗೊಳ್ಳಬೇಕು ಎಂದರು.
ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಪ್ರತಿಭಟನಕಾರರು ಹೆದ್ದಾರಿ ತಡೆಗೆ ಮುಂದಾದರು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ರಸ್ತೆ ತಡೆ ಮಾಡದಂತೆ ಮನವೊಲಿಸಿದರು. ಹೆದ್ದಾರಿ ಇಲಾಖೆಯವರು ಇಲ್ಲಿಗೆ ಬಂದು ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡುತ್ತಿಲ್ಲ ಯಾಕೆ ಎಂದು ತಿಳಿಸಬೇಕು ಎಂದು ಆಗ್ರಹಿಸಿದರು. ಉಪ್ಪಿನಂಗಡಿ ಎಸ್‌ಐ ನಂದಕುಮಾರ್ ಹೆದ್ದಾರಿ ಇಲಾಖೆಯವರನ್ನು ಸಂಪರ್ಕಿಸಿದ್ದು, ಸುಮಾರು 1 ತಾಸು ಬಳಿಕ ಅವರು ಸ್ಥಳಕ್ಕೆ ಆಗಮಿಸಿ ಮಾಹಿತಿ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಬಸ್‌ಗಳಿಗೆ ಅವಕಾಶ: ಇಲಾಖೆ ರಾ. ಹೆದ್ದಾರಿ ಇಲಾಖೆಯ ನಂಜಪ್ಪ ಪ್ರತಿಭಟನಕಾರರ ಬಳಿ ಆಗಮಿಸಿ ಈ ರಸ್ತೆಯಲ್ಲಿ ವೋಲ್ವೋ ಬಸ್ ಸಹಿತ 6 ಚಕ್ರ ತನಕದ ವಾಹನ ಸಂಚಾರಕ್ಕೆಅವಕಾಶ ನೀಡುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ಸುರಕ್ಷತೆ ದೃಷ್ಟಿಯಿಂದ ಬಂದ್ ಮಾಡಲಾಗಿದೆ. ತಮ್ಮ ಬೇಡಿಕೆ ಬಗ್ಗೆ ಮತ್ತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಅವರು ತಿಳಿಸಿದರು. ಇವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಸಿ.ವಿ. ರೆಡ್ಡಿ ಇದ್ದರು.ವೇದಿಕೆ ಸದಸ್ಯರಾದ ದಾಮೋದರ್ ಗುಂಡ್ಯ, ಸುಭಾಶ್ ಗುಂಡ್ಯ, ಯತೀಶ್ ಗುಂಡ್ಯ, ಸೂರ್ಯನಾರಾಯಣ ಶಿಶಿಲ, ಸುಧೀರ್ ಕುಮಾರ್ ಅರಸಿನಮಕ್ಕಿ, ಶರೀಫ್ ಬಿ.ಸಿ.ರೋಡು, ಮಹಮ್ಮದ್ ಅಲ್ತಾಫ್, ಅಶ್ರಫ್, ಮಹಮ್ಮದ್ ಉಪಸ್ಥಿತರಿದ್ದರು.