ಮೈಸೂರು: ಸಭೆಯೊಂದರಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಜನಪ್ರತಿ ನಿಧಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಖಂಡಿಸಿ ಮೈಸೂರು ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿ-ಗ್ರೂಪ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದಜಿಲ್ಲಾಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಡಿ-ಗ್ರೂಪ್ ನೌಕರರು, ಕೋವಿಡ್ ಸಾಂಕ್ರಾಮಿಕ ಕಾಯಿಲೆ ವೇಳೆ ಆರೋಗ್ಯ ಇಲಾಖೆಯ ಎಲ್ಲಾ ವರ್ಗದ ಸಿಬ್ಬಂದಿ ಸಾವನ್ನೂ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಮೇ29 ರಂದು ನಡೆದಕೋವಿಡ್-19 ನಿರ್ವಹಣೆ ಸಂಬಂಧ ಸಾಮಾನ್ಯ ಸಭೆಯಲ್ಲಿ ಸಚಿವರು, ಶಾಸಕರುಹಾಗೂ ಸಂಸದರು ಎಂಎಸ್ ಮಾಡಿರುವ ಸರ್ಜನ್ ಒಬ್ಬರನ್ನು ಎಲ್ಲರ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇದರಿಂದ ನಮ್ಮ ಆತ್ಮಸ್ಥೈರ್ಯಕ್ಕೆ ಪೆಟ್ಟುಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ತಿಂಗಳು ಇಬ್ಬರು ವೈದ್ಯರು ಸೇರಿದಂತೆ ಇತರೆ ಸಿಬ್ಬಂದಿ ಸೋಂಕಿಗೆ ಬಲಿಯಾಗಿದ್ದಾರೆ. ಜೊತೆಗೆ ಗ್ರಾಮೀಣ ಪ್ರದೇಶಹಾಗೂ ತಾಲೂಕುಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ನಿರಂತರವಾಗಿ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ಹೀಗಿದ್ದರೂ ಪೊಲೀಸ್ ರಕ್ಷಣೆ ಸಿಗುತ್ತಿಲ್ಲ. ಈ ನಡುವೆ ಸಚಿವರು, ಶಾಸಕರು ಮತ್ತು ಸಂಸದರು ಆರೋಗ್ಯಾಧಿಕಾರಿಯನ್ನು ನಿಂದಿಸಿ ಅಪಮಾನ ಮಾಡಿರುವುದು ನಮಗೆ ನೋವನ್ನುಂಟು ಮಾಡಿದೆ. ಮುಂದೆ ಇಂತಹ ಘಟನೆ ನಡೆದರೆ ಉಗ್ರ ಹೋರಾಟ ನಡೆಸಲಾಗುವುದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನೌಕರರ ಸಂಘದ ಅಧ್ಯಕ್ಷ ಕೆಂಪರಾಜು,ರತ್ನಬಾಯಿ, ಜಯಮ್ಮ ಸೇರಿದಂತೆ ಅನೇಕರು ಇದ್ದರು.