ಮೈಸೂರು: ದೂರದ ಊರುಗಳಿಂದ ಬಂದಿದ್ದರೂ ಸಿಗಲಿಲ್ಲ ನಾಡದೇವತೆಯ ಪೂಜೆಯನ್ನು ಕಣ್ತುಂಬಿಕೊಳ್ಳುವ ಭಾಗ್ಯ, ಜತೆಗೆ ಕುಂಕುಮ, ತೀರ್ಥ, ಲಾಡು ಪ್ರಸಾದ ಪಡೆಯುವ ಅವಕಾಶ… ಇದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಸಿಬ್ಬಂದಿ ವೇತನ ಹೆಚ್ಚಳಕ್ಕಾಗಿ ನಡೆಸಿದ ಮುಷ್ಕರದಿಂದ ಭಕ್ತರು ಅನುಭವಿಸಿದ ತೊಂದರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಚಾಮುಂಡೇಶ್ವರಿ ದೇವಾಲಯದಲ್ಲಿ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಚಾಮುಂಡಿ ದೇವಳದ ಅರ್ಚಕರು ಮತ್ತು ಸಿಬ್ಬಂದಿ ಮುಷ್ಕರ.
ಬೆಟ್ಟದಲ್ಲಿ ಅರ್ಚಕರು, ಸಿಬ್ಬಂದಿ ಈವರೆಗೂ ಸಾಕಷ್ಟು ಬಾರಿ ಪ್ರತಿಭಟನೆಗಳನ್ನು ನಡೆಸಿದ್ದರೂ, ಇದೇ ಮೊದಲ ಬಾರಿಗೆ ಅರ್ಚಕರು ದೊಡ್ಡಮಟ್ಟದ ಹೋರಾಟ ಕೈಗೊಂಡಿದ್ದಾರೆ. ಅರ್ಚಕರು ಹಾಗೂ ಸಿಬ್ಬಂದಿ ಪ್ರತಿಭಟನೆಯಿಂದ ಭಕ್ತರಿಗೆ ಯಾವುದೇ ತೊಂದರೆ ಆಗಬಾರದೆಂಬ ಕಾರಣಕ್ಕೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಪ್ರತಿಭಟನೆ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮುಂಜಾನೆಯ ಪೂಜೆಯನ್ನು ಹೊರತುಪಡಿಸಿ ನಂತರದಲ್ಲಿ ಯಾವುದೇ ಪೂಜೆ ಹಾಗೂ ಇನ್ನಿತರ ಸೇವೆಗಳು ನಡೆಯಲಿಲ್ಲ.
ಚಾಮುಂಡೇಶ್ವರಿಯ ದರ್ಶನಕ್ಕೆ ಬಂದ ಭಕ್ತರಿಗೆ ಕೇವಲ ದೇವಿಯ ದರ್ಶನ ಪಡೆಯುವ ಅವಕಾಶ ಮಾತ್ರ ಲಭಿಸಿತು. ಉಳಿದಂತೆ ಮಂಗಳಾರತಿ, ಅಭಿಷೇಕ, ತೀರ್ಥ, ಪ್ರಸಾದ ವಿತರಣೆ ಜತೆಗೆ ಲಾಡು ಪ್ರಸಾದದ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ದೇವಸ್ಥಾನದ ಸಿಬ್ಬಂದಿ ಮುಷ್ಕರದಿಂದಾಗಿ ದೇವರ ದರ್ಶನ ಪಡೆಯಲು ಭಕ್ತರು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ಕಾದು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಿಧಾನಸಭೆಯಲ್ಲಿ ಪ್ರಸ್ತಾಪ: ವಿಶ್ವವಿಖ್ಯಾತ ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ 175 ಮಂದಿ ಅರ್ಚಕರು, ಸಹಾಯಕರು ಸೇರಿ ಅಲ್ಲಿನ ಸಿಬ್ಬಂದಿ ಧರಣಿ ಮಾಡುತ್ತಿರು ವುದರಿಂದ ಪೂಜೆ, ಸೇವೆ ನಿಂತು ಕೇವಲ ದರ್ಶನ ಮಾತ್ರ ಅವಕಾಶ ಇದೆ. ಇದರಿಂದ ಸಾವಿರಾರು ಭಕ್ತರಿಗೆ ತೊಂದರೆಯಾಗುತ್ತಿದೆ ಎಂದು ಬಿಜೆಪಿಯ ರಾಮದಾಸ್ ಸದನದ ಗಮನ ಸೆಳೆದು ತಕ್ಷಣ ಸೂಕ್ತ ಕ್ರಮ
ಕೈಗೊಳ್ಳಲು ಆಗ್ರಹಿಸಿದರು.
ಅರ್ಚಕ ಸಿಬ್ಬಂದಿಯ ಧರಣಿ ಗಮನಕ್ಕೆ ಬಂದಿದೆ. ಅಲ್ಲಿನ ಸಿಬ್ಬಂದಿಯ ಪೈಕಿ 95 ಜನರಿಗೆ 5ನೇ ವೇತನ ಆಯೋಗದ ಶಿಫಾರಸು ಪ್ರಕಾರ ವೇತನ ನೀಡಲಾಗುತ್ತಿದೆ. ಉಳಿದವರಿಗೆ ಅದೇ ವೇತನ ನೀಡುವ ಬಗ್ಗೆ ಪರಿಶೀಲಿಸುತ್ತೇವೆ.
● ರಾಜಶೇಖರ ಪಾಟೀಲ ಹುಮ್ನಾಬಾದ್,ಮುಜರಾಯಿ ಸಚಿವ