Advertisement

ಮಣಿಪುರ ಹಿಂಸಾಚಾರ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

11:25 PM Jul 27, 2023 | Team Udayavani |

ಮಂಗಳೂರು: ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ, ಮತ್ತೆ ಶಾಂತಿ ನೆಲೆಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಥೊಲಿಕ್‌ ಸಭಾ ಮಂಗಳೂರು ಪ್ರದೇಶ ಸಮಿತಿ, ಮಂಗಳೂರು ಕ್ರೈಸ್ತ ಧರ್ಮ ಕ್ಷೇತ್ರದ ಮಹಿಳಾ ಆಯೋಗ, ಕ್ರೈಸ್ತ ಐಕ್ಯತೆಯ ಆಯೋಗ, ಮಂಗಳೂರು ಕ್ರಿಶ್ಚಿಯನ್‌ ಕೌನ್ಸಿಲ್‌ ಜಂಟಿ ಆಶ್ರಯದಲ್ಲಿ ಗುರುವಾರ ನಗರದ ಪುರಭವನದ ಮುಂಭಾಗ ಬೃಹತ್‌ ಪ್ರತಿಭಟನೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಕಾರರು ಭಾಗವಹಿಸಿದ್ದರು.

Advertisement

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಕ್ರೈಸ್ತ ಸಂಘಟನೆ ಅಧ್ಯಕ್ಷ ಸ್ಟ್ಯಾನಿ ಪಿಂಟೋ ಅವರು, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲು ಮಾಡುವ ಮೂಲಕ ವಿಶ್ವ ಮಟ್ಟದಲ್ಲಿ ಭಾರತ ಬೆತ್ತಲಾಗಿದೆ. ಸಣ್ಣ ರಾಜ್ಯವಾದ ಮಣಿಪುರವನ್ನು ರಕ್ಷಿಸಲು ಸಾಧ್ಯವಾಗದ ಪ್ರಧಾನಿ ಮೋದಿ, ಭಾರತವನ್ನು ರಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಸತ್ಯ ಹೊರಬರಲಿ
ಮಣಿಪುರ ವಿಚಾರದಲ್ಲಿ ಸತ್ಯ ವಿಚಾರಗಳು ಹೊರ ಬರಲು ಬಿಡುತ್ತಿಲ್ಲ. ಸುಳ್ಳು ಸುದ್ದಿಗಳನ್ನು ಹರಡುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಪ್ರತಿಭಟನೆ ಈಗಷ್ಟೇ ಆರಂಭವಾಗಿದೆ, ಕ್ರೈಸ್ತರನ್ನು ಮುಟ್ಟಿದರೆ ಏನಾಗುತ್ತದೆ ಎಂದು ಇತಿಹಾಸವನ್ನು ನೋಡಿದರೆ ತಿಳಿಯುತ್ತದೆ. ಮಣಿಪುರದಲ್ಲಿ ಮತ್ತೆ ನೆಮ್ಮದಿಯ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಸಮುದಾಯ ಅಲ್ಲಿನ ಜನರೊಂದಿಗೆ ನಿಲ್ಲುತ್ತದೆ. ಕೇಂದ್ರ ಸರಕಾರದ ನ್ಯಾಯ ಒದಗಿಸದಿದ್ದರೆ ದೇಶದ ಎಲ್ಲೆಡೆಯಿಂದ ದಿಲ್ಲಿ ಚಲೋ ಹಮ್ಮಿಕೊಂಡು ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಮಣಿಪುರ ಚಲೋ ಆಯೋಜಿಸಲೂ ಚಿಂತನೆ ನಡೆಸಲಾಗುವುದು ಎಂದರು.

ಉಲೇಮಾ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್‌.ಪಿ. ಮೊಹಮ್ಮದ್‌ ದಾರಿಮಿ ಮಾತನಾಡಿ, ಪ್ರಧಾನಿ ಮೊಸಳೆ ಕಣ್ಣೀರು ಹಾಕುವುದು ಬಿಟ್ಟು ಮಣಿಪುರ ಶಾಂತಿ ನೆಲೆಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ್ತಿ ವಿದ್ಯಾದಿನಕರ್‌ ಮಾತನಾಡಿ, ಮಣಿಪುರ ಹಿಂಸಾಚಾರ ವಿಚಾರವಾಗಿ ಕೇಂದ್ರ ಮತ್ತು ಅಲ್ಲಿನ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.

Advertisement

ಧರ್ಮಪ್ರಾಂತದ ಶ್ರೇಷ್ಠಗುರು ವಂ| ಮ್ಯಾಕ್ಸಿಂ ನರೋನ್ಹಾ, ಮಾಜಿ ಸಚಿವ ರಮಾನಾಥ ರೈ, ಪಾಲಿಕೆ ವಿಪಕ್ಷ ನಾಯಕ ನವೀನ್‌ ಡಿ’ಸೋಜಾ, ಸದಸ್ಯ ಲ್ಯಾನ್ಸಿ ಲೋಟ್‌ ಪಿಂಟೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌., ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕ ಫಾ| ಜೆ.ಬಿ. ಸಲ್ಡಾನಾ, ಮಹಿಳಾ ಆಯೋಗದ ಕಾರ್ಯದರ್ಶಿ ಅನಿತಾ ಡೇಸಾ ಫ್ರ್ಯಾಂಕ್‌, ಪಿಆರ್‌ಒ ರಾಯ್‌ ಕ್ಯಾಸ್ಟಲಿನೋ, ಪಾಲನ ಸಮಿತಿಯ ಜಾನ್‌ ಡಿ’ಸೋಜಾ, ಪ್ರಮುಖರಾದ ಫಾ| ರೂಪೇಶ್‌ ಮಾಡ್ತಾ, ರೆ| ಪ್ರಭುರಾಜ್‌, ರೆ| ಸಂದೀಪ್‌ ಥಿಯೋಫಿಲ್‌, ರೆ| ಅಲ್ಫೆ†ಡ್‌ ಮನೋಹರ್‌, ಕೆಥೋಲಿಕ್‌ ಸಭಾ ಅಧ್ಯಕ್ಷ ಆಲ್ವಿನ್‌ ಡಿ’ಸೋಜಾ, ಕೆಥೋಲಿಕ್‌ ಸಭಾ ಮಾಜಿ ಅಧ್ಯಕ್ಷ ರಾಲ್ಫಿ ಡಿಕೋಸ್ತ, ಸುನೀಲ್‌ ಕುಮಾರ್‌ ಬಜಾಲ್‌, ಎಂಸಿಸಿ ಬ್ಯಾಂಕ್‌ ಚೇರ¾ನ್‌ ಅನಿಲ್‌ ಲೋಬೋ, ಮಾಧ್ಯಮ ಸಂಯೋಜಕ ಎಲಿಯಾಸ್‌ ಫೆರ್ನಾಂಡಿಸ್‌ ಮೊದಲಾದವರು ಭಾಗವಹಿಸಿದ್ದರು.

ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next