Advertisement

ಬೆಟ್ಟಹಳ್ಳಿ ಗ್ರಾಮದ ಯುವತಿ ಹತ್ಯೆ ಖಂಡಿಸಿ ಪ್ರತಿಭಟನೆ

01:05 PM Oct 13, 2020 | Suhan S |

ಕುದೂರು: ಬಾಳಿ ಬದುಕಬೇಕಾದ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ಅಮಾನುಷವಾಗಿ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗುತ್ತಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತ ಕೃತ್ಯ ಎಂದು ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್‌.ಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕುದೂರು ಗ್ರಾಮದ ಡಾ. ಶ್ರೀಶಿವಕುಮಾರ ಸ್ವಾಮೀಜಿ ಬಸ್‌ ನಿಲ್ದಾಣದಲ್ಲಿ ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ದಲಿತ ಹಕ್ಕುಗಳ ಸಮಿತಿ ಸಂಘಟನೆಯಿಂದ ಬೆಟ್ಟಹಳ್ಳಿ ಗ್ರಾಮದ ಯುವತಿ ಹೇಮಲತಾ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಹಿಳಾ ಆಯೋಗ ಇದ್ದೂ ಇಲ್ಲದಂತೆ ಇದೆ. ಜವಾಬ್ದಾರಿ ಹೊರಬೇಕಾದ ಜನರೆ ಮೈಮರೆತು ಕುಳಿತಾಗ ಸಮಾಜದಲ್ಲಿ ಇಂತಹ ಘಟನೆಗಳು ಆಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.

ನಿರ್ಭಯಾ ಪ್ರಕರಣದ ನಂತರ ನ್ಯಾ. ವರ್ಮ ನೀಡಿರುವ ಶಿಫಾರಸ್ಸುಗಳ ಆಧಾರದಲ್ಲಿ ತನಿಖೆ ಆಗಬೇಕು. ಹಂತಕರನ್ನು ಶೀಘ್ರದಲ್ಲೇ ಬಂಧಿಸಿ ಸತ್ಯದ ಘನತೆ ಎತ್ತಿ ಹಿಡಿಯಲು ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಶ್ರಮಿಸಬೇಕಾಗಿದೆ ಎಂದು ಹೇಳಿದರು. ದಲಿತ ಹಕ್ಕುಗಳ ಸಮಿತಿ ಮುಖ್ಯಸ್ಥೆ ಎಸ್‌.ಜಿ. ವನಜಾ ಮಾತನಾಡಿ, ತಪ್ಪು ಮಾಡಿರುವ ವ್ಯಕ್ತಿ ಯಾವುದೇ ಜಾತಿ, ಧರ್ಮ, ಪಕ್ಷದವನಾಗಿದ್ದರೂ ಯಾವುದೇ ಮುಲಾಜು ನೋಡದೆ ಬಂಧಿಸಬೇಕು. ಸರ್ಕಾರ ಈ ವಿಷಯದಲ್ಲಿ ನಿರಾಸಕ್ತಿ ತೋರಿದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಮಾಗಡಿ ತಾಲೂಕು ದಲಿತ ಹಕ್ಕುಗಳ ಒಕ್ಕೂಟ ಸಮಿತಿ ಮುಖ್ಯಸ್ಥ ಚಿಕ್ಕರಾಜು ಮಾತನಾಡಿ, ಹೆಣ್ಣು ಮಕ್ಕಳ ಮೇಲಿನ ಶೋಷಣೆ ಮತ್ತು ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಯಾಗ ಬೇಕು. ಅತ್ಯಾಚಾರದಂತಹ ಪ್ರಕರಣಗಳು ದಾಖಲಾದರೂ ಹಲವಾರು ಕಾರಣಗಳಿಂದ ನ್ಯಾಯ ಸಿಗದೆ ಕತ್ತಲೆಗೆ ತಳ್ಳಲ್ಪಟ್ಟಿವೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಳನ್ನು ರಕ್ಷಿಸಲು ಯಾರೇ ಬಂದರೂ ಅವರನ್ನುಕೂಡಾ ಬಂಧಿಸುವಕೆಲಸವಾಗಬೇಕು ಎಂದು ಹೇಳಿದರು. ಈ ವೇಳೆ ಪೋಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ನರೇಂದ್ರಬಾಬು ಅವರಿಗೆ ಒಕ್ಕೂಟಗಳ ಪರವಾಗಿ ಮನವಿ ನೀಡಲಾಯಿತು. ಆಶಾ ಕಾರ್ಯಕರ್ತೆಯರು, ಮತ್ತು ಗ್ರಾಮಸ್ಥರು ಪ್ರತಿಭಟನಾ ಚಳುವಳಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next