Advertisement

ಕಲ್ಯಾಣ ಕರ್ನಾಟಕ ಸಂಸದರ ಹರಾಜು

07:45 PM Mar 24, 2021 | Team Udayavani |

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಂಜೂರಾಗಿದ್ದ ಪ್ರಮುಖ ಯೋಜನೆಗಳ ಸ್ಥಗಿತ ಮತ್ತು ಸ್ಥಳಾಂತರ ಖಂಡಿಸಿ ಕನ್ನಡ ಸೈನ್ಯ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕಲ್ಯಾಣ ಕರ್ನಾಟಕದ ಸಂಸದರನ್ನು ಹರಾಜು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.

Advertisement

ಹೈದರಾಬಾದ್‌ ಕರ್ನಾಟಕ ಹೆಸರು ತೆಗೆದು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದರೂ, ಜನರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯ ಮಾಡಲಾಗುತ್ತಿದ್ದು, ಈ ಭಾಗದಿಂದ ಆಯ್ಕೆಯಾದ ಸಂಸದರು ಅನ್ಯಾಯದ ಧ್ವನಿಯನ್ನು ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಸದರಾದ ಡಾ| ಉಮೇಶ ಜಾಧವ, ಭಗವಂತ ಖೂಬಾ, ರಾಜಾ ಅಮರೇಶ್ವರ ನಾಯಕ ಅವರ ಭಾವಚಿತ್ರ ಹಿಡಿದ ಪ್ರತಿಭಟನಾಕಾರರು ಮುಖ್ಯ ರಸ್ತೆಯಲ್ಲಿ 50 ಪೈಸೆ, 80 ಪೈಸೆ ಮತ್ತು 1ರೂ. ಎಂದು ಘೋಷಣೆ ಕೂಗಿ ಅಣಕವಾಡಿದರು.

ಕಲ್ಯಾಣ ಕರ್ನಾಟಕ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾರತಮ್ಯ ತೋರುತ್ತಿವೆ. ಶಿಕ್ಷಣ ಪ್ರಗತಿ, ಉದ್ಯೋಗ ಸೃಷ್ಟಿಯಂತ ಪ್ರಮುಖ ಯೋಜನೆಗಳನ್ನು ಕಿತ್ತುಕೊಂಡು ಈ ಭಾಗದ ಜನರಿಗೆ ಮೋಸ ಮಾಡಲಾಗುತ್ತಿದೆ. ಈಗಾಗಲೇ ರಾಯಚೂರಿಗೆ ಮಂಜೂರಿಗಾಗಿದ್ದ ಐಟಿಐ ಸಂಸ್ಥೆಯನ್ನು ಧಾರವಾಡಕ್ಕೆ ಸ್ಥಳಾಂತರಿಸಿ ವಂಚಿಸಲಾಗಿದೆ. ಈಗ ನಿರಂತರವಾಗಿ ಒಂದೊಂದರ ಹಿಂದೆ ಒಂದನ್ನು ರದ್ದು ಮಾಡುವುದು, ಇಲ್ಲವೇ ಬೇರೆಡೆ ಸ್ಥಳಾಂತರ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಕಿಡಿಕಾರಿದರು.

ಕಲಬುರಗಿ ರೈಲ್ವೆ ವಿಭಾಗವನ್ನು ವಿನಾ ಕಾರಣ ರದ್ದುಗೊಳಿಸಿರುವುದು ಸರಿಯಾದ ಕ್ರಮವಲ್ಲ. ರೈಲ್ವೆ ವಿಭಾಗೀಯ ಕೇಂದ್ರ ರದ್ದುಗೊಳಿಸುವ ನಿರ್ಣಯದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು. ಇಎಸ್‌ಐ ಆಸ್ಪತ್ರೆಯನ್ನು ಏಮ್ಸ್‌ ಆಗಿ ಮೇಲ್ದರ್ಜೆಗೆ ಏರಿಸುವುದಾಗಿ ಮುಖ್ಯಮಂತ್ರಿಗಳೇ ಭರವಸೆ ನೀಡಿದ್ದರು. ಆದರೆ, ಈಗ ಅದನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಯಾಕೆ ಎಂದು ಪ್ರತಿಭಟನಾನಿತರರು ಪ್ರಶ್ನಿಸಿದರು.

ಕಲಬುರಗಿಯಲ್ಲಿ ಜವಳಿ ಪಾರ್ಕ್‌ ಅಭಿವೃದ್ಧಿ ಪಡಿಸಲು ಸಕಲ ರೀತಿಯ ಸಿದ್ಧತೆಗಳನ್ನು ನಡೆಸಿದ್ದವು. ಏಕಾಏಕಿ ಜವಳಿ ಪಾರ್ಕ್‌ನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಇತ್ತ, ರಾಜ್ಯ ಸರ್ಕಾರ ತೊಗರಿ ತಂತ್ರಜ್ಞಾನ ಪಾರ್ಕ್‌ ದಿಢೀರ್‌ ರದ್ದು ಮಾಡಿದೆ. ಕೇಂದ್ರೀಯ ವಿಶ್ವವಿದ್ಯಾಲಯದ ಸೆಂಟರ್‌ ಫಾರ್‌ ಎಕ್ಸ್‌ಲೆನ್ಸ್‌ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುವ ಹುನ್ನಾರ ನಡೆಸಲಾಗಿದೆ. ಅಲ್ಲದೇ, ನಿಮ್‌j ಘೋಷಣೆಯಾಗಿ ವರ್ಷಗಳೇ ಕಳೆದರೂ, ಅದಿನ್ನು ಗಗನ ಕುಸುಮವೇ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಮುಂಜೂರಾಗಿದ್ದ ಯಾವುದೇ ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಲಿ, ಸ್ಥಳಾಂತರ ಮಾಡುವುದನ್ನಾಗಲಿ ಮಾಡಬಾರದು. ಎಲ್ಲ ಯೋಜನೆಗಳನ್ನು ಯಥಾಪ್ರಕಾರ ಮುಂದುವರೆಸಬೇಕು. ಈ ಭಾಗದ ಜನರ ಹಕ್ಕೊತ್ತಾಯದ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

Advertisement

ಸಂಘಟನೆ ಅಧ್ಯಕ್ಷ ಸೋಮನಾಧ ಕಟ್ಟಿಮನಿ, ಮುಖಂಡರಾದ ರಾಜಶೇಖರ ಕಟ್ಟಿಮನಿ, ಬಸವರಾಜ, ಸುನೀಲ, ಶರಣ ಪಾಟೀಲ, ರಾಹುಲ್‌ ಕೆ., ಕಾಶಿನಾಥ, ಶರಣು ಬಾವಿಮನಿ, ವಿಶ್ವನಾಥ ಭೀಮಳ್ಳಿ, ಶ್ರೀಧರ, ಶರಣು ಹಂಗರಗಿ, ಶರಣು ಗೋಳಾ, ರಾಜುಕುಮಾರ, ಕವಿರಾಜ ಕೋರಿ, ಸತೀಶ ಕೋಟಿ, ಪ್ರವೀಣ ಕುಮಾರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next