ಹುಣಸೂರು: ಮಂಗಳೂರು ಜಿಲ್ಲಾ ಯುವ ಮೋರ್ಚಾದ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಖಂಡಿಸಿ ತಾಲೂಕು ಬಿಜೆಪಿ ವತಿಯಿಂದ ಗುರುವಾರದಂದು ಪ್ರತಿಭಟನೆ ನಡೆಸಿದರು.
ನಗರದ ಸಂವಿದಾನ ಸರ್ಕಲ್‌ನಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳನ್ನು ಬಂಧಿಸಬೇಕು. ಇತ್ತೀಚೆಗೆ ಮೂವರು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಹತ್ಯೆಗೈದವರನ್ನು ಗಲ್ಲಿಗೇರಿಸಬೇಕು. ಉತ್ತರ ಪ್ರದೇಶ ಮಾದರಿ ಕಠಿಣ ಕಾನೂನು ಜಾರಿಗೊಳಿಸಬೇಕು. ಪಿಎಫ್.ಐ, ಎಸ್.ಎಫ್.ಐ, ಎಸ್.ಡಿ.ಪಿ.ಐ ಸಂಘಟನೆಗಳನ್ನು ನಿಷೇಧಿಸಬೇಕೆಂಬ ಘೋಷಣೆ ಕೂಗಿದರು.
ನಂತರ ಮಾತನಾಡಿದ ತಾಲೂಕು ಬಿಜೆಪಿ ಅಧ್ಯಕ್ಷ ಹಳ್ಳದ ಕೊಪ್ಪಲು ನಾಗಣ್ಣ, ರಾಜ್ಯ ಮತ್ತು ರಾಷ್ಟ್ರದಲ್ಲಿ ಹಿಂದೂಗಳ ಹತ್ಯೆ ನಿರಂತರವಾಗಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ಸಹ ಹಿಂದೂಗಳ ಹತ್ಯೆಗೆ ಮುಕ್ತಿ ಸಿಗುತ್ತಿಲ್ಲ. ಉಗ್ರವಾದ ಹೆಚ್ಚುತ್ತಲೇ ಇದ್ದು ಕಡಿವಾಣ ಹಾಕದಿದ್ದಲ್ಲಿ ಹಿಂದೂ ಯುವಕರಿಗೆ ಉಳಿಗಾಲವಿಲ್ಲ. ಹೀಗಾಗಿ ಯು.ಪಿ. ಮಾದರಿಯ ಕಾನೂನು ಜಾರಿಗೆ ಸರಕಾರ ಗಂಭೀರ ಚಿಂತನೆ ನಡೆಸಬೇಕೆಂದು ಒತ್ತಾಯಿಸಿದರು.
ನಗರ ಅಧ್ಯಕ್ಷ ಹಾಗೂ ಹೂಡ ಅಧ್ಯಕ್ಷ ಗಣೇಶ್ ಕುಮಾರ ಸ್ವಾಮಿ ಮಾತನಾಡಿ, ಕಳೆದ ಆರು ತಿಂಗಳಿನಿಂದಾಚೆಗೆ ಹಿಂದೂ ಸಂಘಟನೆಗಳ ಮೂವರ ಹತ್ಯೆಯಾಗಿದ್ದು, ನಮ್ಮ ಸರಕಾರಗಳು ಏನೂ ಮಾಡಲಾಗದೆ ಕೈಕಟ್ಟಿ ಕುಳಿತಿದ್ದು, ದುಶ್ಕೃತ್ಯ ಎಸಗಿರುವವರನ್ನು ಬಂಧಿಸುವುದರೊಂದಿಗೆ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.
ನಗರಸಭಾ ಸದಸ್ಯ ವಿವೇಕಾನಂದ ಮಾತನಾಡಿ, ಸರಣಿ ಮಾದರಿಯಲ್ಲಿ ಅಮಾಯಕ ಹಿಂದೂ ಯುವಕರ ಹತ್ಯೆ ನಡೆಯುತ್ತಲೇ ಇದ್ದು, ನಮ್ಮದೇ ಸರಕಾರವಿದ್ದರೂ ಏನೂ ಮಾಡಲಾಗದ ಸ್ಥಿತಿಗೆ ತಲುಪಿದ್ದೇವೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ರಮೇಶ್, ಶ್ರೀನಿವಾಸ್, ಅರುಣ್ ಚೌವಾಣ್ಹ್, ನಗರ ಮಹಿಳಾ ಅಧ್ಯಕ್ಷೆ ಕಮಲ ಪ್ರಕಾಶ್, ತಂಬಾಕು ಮಂಡಳಿ ಸದಸ್ಯ ದಿನೇಶ್, ಭೂ ನ್ಯಾಯಾ ಮಂಡಳಿ ಸದಸ್ಯ ಗಣಪತಿ, ಮುಖಂಡರಾದ ನಾಗರಾಜ ಮಲ್ಲಾಡಿ, ಹನಗೋಡು ಮಂಜುನಾಥ್, ಹರವೆ ಮಹೇಶ್, ನಾಗೇಂದ್ರ, ಗೋವಿಂದ ನಾಯಕ್, ನಾರಾಯಣ, ರವೀಶ್, ಸುರೇಗೌಡ ಸೇರಿದಂತೆ ಅನೇಕರಿದ್ದರು.