Advertisement
ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸೋಮವಾರ ನಡೆದ ಪ್ರತಿಭಟನೆಯ ಬಳಿಕ ಸಂಜೆ ಜರಗಿದ ಸರ್ವ ಪಕ್ಷ ನಾಯಕರು, ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು. ಬಂದ್ಗೆಬದಲಾಗಿ ಬೆಳಗ್ಗೆ 9.30ಕ್ಕೆ ಶಾಸಕ ಲಾಲಾಜಿ ಮೆಂಡನ್ ನೇತೃತ್ವದಲ್ಲಿ ಹೆಜಮಾಡಿ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ತೀರ್ಮಾನಿಸಲಾಯಿತು.
ಸ್ಥಳೀಯ ವಾಹನಗಳಿಂದ ಸುಂಕ ಸಂಗ್ರಹ ವಿರೋಧಿಸಿ ಹೆಜಮಾಡಿಯ ಟೋಲ್ ಪ್ಲಾಜಾದ ಬಳಿ ಸೋಮವಾರ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಹೆದ್ದಾರಿ ಟೋಲ್ ವಿರೋಧಿ ಹೋರಾಟಗಾರರ ಸಮಿತಿಯ ಸಂಚಾಲಕ ಶೇಖರ್ ಹೆಜ್ಮಾಡಿ ಅವರು ಮಾತನಾಡಿ, ಮತ ನೀಡಿದ ಜನತೆಗೆ ತೊಂದರೆಯಾದಾಗ ಜಿಲ್ಲಾಡಳಿತವನ್ನು ಪ್ರಶ್ನಿಸಬೇಕಾದ ಸ್ಥಳೀಯ ಶಾಸಕರು, ಸಂಸದರು ಸುಮ್ಮನಿರುವುದು ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
ಹೋರಾಟ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಜಿಲ್ಲಾಧಿಕಾರಿಗಳ ವರ್ತನೆ ಶೋಭೆ ತರುವಂತಾದ್ದಲ್ಲ. ಜಿಲ್ಲೆಯಲ್ಲಿ ಕಿತ್ತುತಿನ್ನುವ ಮರಳಿನ ಸಮಸ್ಯೆ, ಬಡವರಿಗೆ ಹಕ್ಕುಪತ್ರ ದೊರೆಯದಿರುವುದೇ ಮೊದಲಾದ ಅನೇಕ ಸಮಸ್ಯೆಗಳಿದ್ದರೂ ಅತ್ತ ಗಮನ ಹರಿಸದೆ ನವಯುಗದಂತಹ ಉದ್ಯಮಿಯ ರಕ್ಷಣೆಗೆ ನಿಂತಿದ್ದಾರೆ. ನವಯುಗ ನಿರ್ಮಾಣ ಕಂಪೆನಿ ಸ್ಥಳೀಯರಿಂದ ಮಾಡುತ್ತಿರುವ ಸುಲಿಗೆಯನ್ನು ಬೆಂಬಲಿಸಿ ಪೊಲೀಸ್ ರಕ್ಷಣೆಯನ್ನೂ ನೀಡಿರುವ ಅವರ ನಡೆ ಯಾರೂ ಮೆಚ್ಚುವಂಥದ್ದಲ್ಲ. ಅವರನ್ನು ತತ್‌ಕ್ಷಣ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
Advertisement
ಪೊಲೀಸರೇ ಟೋಲ್ ವಸೂಲಿಗರು!ಹೆಜಮಾಡಿ ಗೇಟ್‌ನಲ್ಲಿ ಸ್ಥಳೀಯ ಕೆಲವರು ಟೋಲ್ ನೀಡೆವೆಂದು ಪ್ರತಿಭಟಿಸಿದಾಗ ಪೊಲೀಸರೇ ಮನವೊಲಿಸಿ ಟೋಲ್ ಪಡೆದು ಕಂಪೆನಿಗೆ ನೀಡುತ್ತಿದ್ದರು. ಮೂಲ್ಕಿಯ ಖಾಸಗಿ ಬಿಳಿ ಬೋರ್ಡ್ ಕಾರೊಂದರ ಮಾಲಕರು ಟೋಲ್ ನೀಡೆನೆಂದು ಪ್ರತಿಭಟಿಸಿದಾಗ ಅವರನ್ನು ಪಡುಬಿದ್ರಿ ಠಾಣೆ ವರೆಗೂ ಕರೆದೊಯ್ಯಲಾಯಿತು. ಬಳಿಕ ಅಲ್ಲಿ ಅವರನ್ನು ಬಿಟ್ಟು ಕಳುಹಿಸಲಾಗಿದೆ. ಹೆಜಮಾಡಿ ವಾಸಿಗಳಿಗೆ ವಿನಾಯಿತಿ
ಹೆಜಮಾಡಿ ವಾಸಿಗಳಿಗೆ ಟೋಲ್‌ನಿಂದ ಸಂಪೂರ್ಣ ವಿನಾಯಿತಿ ಘೋಷಿಸಲಾಗಿದೆ. ಬಿಳಿ ನಂಬರ್ ಪ್ಲೇಟ್‌ನ ಹೆಜಮಾಡಿಯ ವಾಹನ ಮಾಲಕರು ಸೂಕ್ತ ದಾಖಲೆ ಒದಗಿಸಿ ಪಾಸ್ ಪಡೆದುಕೊಳ್ಳುವಂತೆ ನವಯುಗ್ ತಿಳಿಸಿದೆ.
ಟೋಲ್ ಪ್ಲಾಜಾದ ಎರಡೂ ಕಡೆ 20 ಕಿ.ಮೀ. ವ್ಯಾಪ್ತಿಯ ಬಿಳಿ ನಂಬರ್ ಪ್ಲೇಟ್ ಹೊಂದಿದ ವಾಹನಗಳಿಗೆ ಫೋಟೋ, ಆರ್‌ಸಿ ಮತ್ತು ವಿಳಾಸ ದಾಖಲೆ ನೀಡಿದಲ್ಲಿ ಮಾಸಿಕ 250 ರೂ. ಪಾಸ್ ನೀಡಲಾಗುವುದು. ತಿಂಗಳಲ್ಲಿ ಎಷ್ಟು ಬಾರಿ ಬೇಕಾದರೂ ಪ್ರಯಾಣಿಸಬಹುದು. ಎಲ್‌ಸಿವಿ ವಾಹನಗಳಿಗೆ ತಿಂಗಳಿಗೆ 1,850 ರೂ. ಪಾವತಿಸಿದಲ್ಲಿ ಮಾಸಿಕ 50 ಟ್ರಿಪ್ ಪ್ರಯಾಣಿಸಬಹುದು. ಬಸ್ ಮತ್ತು ಟ್ರಕ್‌ಗಳು 3,880 ರೂ. ಪಾವತಿಸಿದಲ್ಲಿ ಮಾಸಿಕ 50 ಟ್ರಿಪ್ ಪ್ರಯಾಣಿಸಬಹುದು. ಎಂಎವಿ ವಾಹನಗಳು 6,085 ರೂ. ಪಾವತಿಸಿದಲ್ಲಿ ಮಾಸಿಕ 50 ಟ್ರಿಪ್ ಪ್ರಯಾಣಿಸಬಹುದು ಎಂದು ನವಯುಗ್ ಪ್ರಕಟನೆ ತಿಳಿಸಿದೆ. ಇದೇ ವೇಳೆ ಹಳದಿ ನಂಬರ್ ಪ್ಲೇಟ್ ವಾಹನಗಳ ಪಾಸ್ ದರ ಬಗ್ಗೆ ಕಂಪೆನಿಯೊಂದಿಗೆ ಮಾತುಕತೆ ನಡೆಸಿ ಶೀಘ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಕಂಪೆನಿ ತಿಳಿಸಿದೆ.