ಅಂಕೋಲಾ: ಮಂಜಗುಣಿ-ಗಂಗಾವಳಿ ನಡುವಿನ ಸೇತುವೆ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣು ತೆರವುಗೊಳಿಸುವಂತೆ ನಾಗರಿಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಉದಯ ಕುಂಬಾರ, ಪಿಐ ಸಂತೋಷ ಶೆಟ್ಟಿ ತಕ್ಷಣ ಈ ಮಣ್ಣನ್ನು ತೆರವುಗೊಳಿಸುವಂತೆ ಇಂಜಿನಿಯರ್‌ಗಳಿಗೆ ಎಚ್ಚರಿಸಿದ್ದರು. ಆದಾಗ್ಯೂ ಇಲ್ಲಿ ಯಾವೊಂದೂ ಕೆಲಸ ನಡೆದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಮಂಜಗುಣಿ- ಗಂಗಾವಳಿ ನಡುವಿನ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇದನ್ನು ಗುತ್ತಿಗೆ ಪಡೆದ ಡಿಆರ್‌ಎನ್ ಇನ್ಫ್ರಸ್ಟ್ರಕ್ಚರ್ ಕಂಪನಿಯವರು ಮಾತ್ರ ಆಮೆಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವಾಗ ಇಲ್ಲಿ ಕೆಲಸ ನಡೆಯಲು ಆರಂಭವಾಗಿತ್ತೋ ಮಳೆಗಾಲದಲ್ಲಿ ಗಂಗಾವಳಿ ನದಿಗೆ ನೆರೆ ಬರಲು ಕಾರಣವಾಗಿತ್ತು. ಇಷ್ಟೆಲ್ಲ ತಿಳಿದಿದ್ದರೂ ಕೂಡ ಜಿಲ್ಲಾಡಳಿತ ನಿದ್ದೆ ಮಂಪರಿನಲ್ಲಿದ್ದಂತಿದೆ ಎಂದೂ ದೂರಲಾಗಿದೆ.
ಗಂಗಾವಳಿ ನದಿಗೆ ನೆರೆ ಉಂಟಾಗಿದ್ದರಿಂದ 2 ತೂಗು ಸೇತುವೆ, 1 ಸೇತುವೆ ಸಂಪೂರ್ಣ ನಾಶವಾಗಿತ್ತು. ಸುಮಾರು 10 ಕೋಟಿ ರೂ.ಗೂ ಅಧಿಕ ಹಾನಿ ಉಂಟಾಗಿತ್ತು. ಆದರೆ ಮಳೆಗಾಲ ಸಮೀಪಿಸುತ್ತಿದ್ದಂತೆಯೇ ಕಾಳಜಿ ಕೇಂದ್ರಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದಾರೆ. ಆದರೆ ಈ ಎಲ್ಲಾ ಕೃತಕ ನೆರೆಗೆ ಕಾರಣವಾಗಿರುವ ಮಂಜಗುಣಿ ಸೇತುವೆ ನಿರ್ಮಾಣಕ್ಕೆ ಹಾಕಿದ್ದ ಮಣ್ಣನ್ನು ತೆಗೆಸಲು ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಅಷ್ಟಾಗಿ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇನ್ನು ಕಂಪನಿಯವರು ಕೂಡ ಈ ಅಧಿಕಾರಿಗಳಿಗೆ ಕ್ಯಾರೇ ಎನ್ನುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ತಹಶೀಲ್ದಾರ್ ಉದಯ ಕುಂಬಾರ ಸ್ಥಳಕ್ಕೆ ಆಗಮಿಸಿ ತಕ್ಷಣ ಮಂಜಗುಣಿ ಭಾಗದಲ್ಲಿರುವ ಅಲ್ಪ ಪ್ರಮಾಣದ ಮಣ್ಣನ್ನು ತೆರವುಗೊಳಿಸಿ ಹಾಗೂ ಗಂಗಾವಳಿ ಭಾಗದಲ್ಲಿ ಮೂರು ಹಿಟಾಚಿ ಹಾಕಿ ತೆಗೆಸಿ ನಂತರ ಬಾರ್ಜ್ ಮೂಲಕ ನದಿಯಾಳದಲ್ಲಿರುವ ಮಣ್ಣನ್ನು ಸಂಪೂರ್ಣ ತೆಗೆಯಬೇಕು ಎಂದು ಸ್ಥಳದಲ್ಲಿದ್ದ ಸೈಟ್ ಇಂಜಿನಿಯರ್ ರಾಘವೇಂದ್ರ ಅವರಿಗೆ ಎಚ್ಚರಿಕೆ ನೀಡಿದ್ದರು. ಇಷ್ಟಾಗಿಯೂ ಮಂಜಗುಣಿ ಭಾಗದಲ್ಲಿ ಮಣ್ಣನ್ನು ಇನ್ನುವರೆಗೂ ತೆಗೆಯದಿರುವುದು ಅವರ ನಿರ್ಲಕ್ಷ್ಯ ಧೋರಣೆಗೆ ಕೈಗನ್ನಡಿಯಂತಾಗಿದೆ.
ಕೃತಕ ನೆರೆಗೆ ಕಾರಣವಾಗಿರುವ ಮಂಜಗುಣಿ- ಗಂಗಾವಳಿ ಸೇತುವೆ ನಿರ್ಮಾಣಕ್ಕೆ ಹಾಕಲಾದ ಮಣ್ಣು ತೆರವುಗೊಳಿಸುವಂತೆ ತಹಶೀಲ್ದಾರರು ಆದೇಶಿಸಿದ್ದರೂ ಕೂಡ ಇನ್ನುವರೆಗೂ ಕ್ರಮ ಕೈಗೊಳ್ಳದಿರುವುದು ನಿಜಕ್ಕೂ ವಿಪರ್ಯಾಸ. ಇದು ಹೀಗೇ ಮುಂದುವರೆದಲ್ಲಿ ಜೂ.13 ರಂದು ತಹಶೀಲ್ದಾರ್ ಕಚೇರಿ ಎದುರು ಸಮಸ್ತ ಗಂಗಾವಳಿ ನದಿ ತಟದ ಜನರು ಪ್ರತಿಭಟನೆ ನಡೆಸಲಿದ್ದೇವೆ. –
ರಮೇಶ ಗೌಡ, ಶಿರೂರು,ಗ್ರಾ.ಪಂ. ಮಾಜಿ ಸದಸ್ಯ
ಅಧಿಕಾರಿಗಳು ಗಡುವು ನೀಡಿದರೂ ಕೂಡ ಗುತ್ತಿಗೆ ಪಡೆದ ಕಂಪನಿಯವರು ಅದನ್ನು ಪಾಲಿಸುತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿಯೇ ಸಾಕಷ್ಟು ಅನಾಹುತವನ್ನು ಅನುಭವಿಸಿದ್ದೇವೆ. ಆದರೂ ಕೂಡ ವೈಜ್ಞಾನಿಕವಾಗಿ ಕಾರಣವನ್ನು ಹುಡುಕಿ ಅದನ್ನು ಸರಿಪಡಿಸುವ ವಿಚಾರ ಅಧಿಕಾರಿಗಳಿಗೆ ಇಲ್ಲದಿರುವುದು ಇನ್ನೊಂದು ದುರಂತ. ಈಗಲಾದರೂ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. –
ನಾಗರಾಜ ಮಂಜಗುಣಿ, ಸ್ಥಳೀಯರು