Advertisement

ಸಂಸದ ಜಾಧವ ಮನೆ ಎದುರು ಪ್ರತಿಭಟನೆ

06:31 PM Mar 25, 2021 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರಗಿಗೆ ಘೋಷಣೆಯಾಗಿದ್ದ ರೈಲ್ವೆ ವಿಭಾಗಿಯ ಕಚೇರಿ, ಜವಳಿ ಪಾರ್ಕ್‌, ಏಮ್ಸ್‌ ಆಸ್ಪತ್ರೆ ಸೇರಿ ಅನೇಕ ಯೋಜನೆಗಳು ಕೈ ತಪ್ಪಿದ್ದರೂ, ಸಂಸದ ಡಾ| ಉಮೇಶ ಜಾಧವ ಸುಮ್ಮನೆ ಕುಳಿತಿದ್ದಾರೆ ಎಂದು ಆರೋಪಿಸಿ ಸಿಪಿಐಎಂ ಪಕ್ಷದ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಮಿನಿ ವಿಧಾನಸೌಧ ಆವರಣದಲ್ಲಿರುವ ಸಂಸದ ಡಾ| ಉಮೇಶ ಜಾಧವ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಲಬುರಗಿ ಶಾಸಕರು, ಸಂಸದರು ಬಾಯಿ ಮುಚ್ಚಿಕೊಂಡು ಕುಳಿತಿರುವುದರಿಂದಲೇ ಜಿಲ್ಲೆಗೆ ಅನ್ಯಾಯವಾಗುತ್ತಿದೆ. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾದರೂ ಯಾವುದೇ ಬದಲಾವಣೆಯಾಗಲಿ, ಅಭಿವೃದ್ಧಿಯಾಗಲಿ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿರುವ ನಡುವೆಯೇ, ತೊಗರಿ ತಂತ್ರಜ್ಞಾನ ಪಾರ್ಕ್‌ ಕೈಬಿಟ್ಟು ರೈತರಿಗೆ ದ್ರೋಹ ಬಗೆಯಲಾಗಿದೆ. ಅಲ್ಲದೇ, ಜವಳಿ ಪಾರ್ಕ್‌ ರದ್ದು ಮಾಡಲಾಗಿದೆ. ಇದರಿಂದ ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಮೇಲೂ ಬರೆ ಎಳೆದಂತಾಗಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ರೈಲ್ವೆ ವಿಭಾಗೀಯ ಕಚೇರಿ, ಜವಳಿ ಪಾರ್ಕ್‌, ಏಮ್ಸ್‌ ಆಸ್ಪತ್ರೆಯು ಕಲಬುರಗಿಯಲ್ಲೇ ಸ್ಥಾಪಿಸಲು ಸಂಸದರು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಈ ಭಾಗದ ಯೋಜನೆಗಳನ್ನು ರದ್ದುಗೊಳಿಸಬಾರದು ಎಂದು ಆಗ್ರಹಿಸಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಮತ್ತು ಸಂಸದರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಮುಖಂಡರಾದ ವೌಲಾ ಮುಲ್ಲಾ, ಕೆ.ನೀಲಾ, ಸುಧಾಮ ಧನ್ನಿ, ಭೀಮಶೆಟ್ಟಿ ಯಂಪಳ್ಳಿ, ಪಾಂಡುರಂಗ ಮಾವಿನಕರ್‌ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next