Advertisement

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ

03:33 PM Feb 18, 2020 | Suhan S |

ಹಾವೇರಿ: ದೇವಗಿರಿ ಗಿರಿಮಲ್ಲೇಶ್ವರ ಗುಡ್ಡದ ಸರ್ಕಾರಿ ಜಾಗೆಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಪಟ್ಟಾ ವಿತರಣೆ ಮಾಡಬೇಕು ಹಾಗೂ ನೆರೆಯಿಂದ ಮನೆಯಿಂದ ಕಳೆದುಕೊಂಡ ಸಂತ್ರಸ್ತರಿಗೆ ಬೇರೆಡೆ ಸರ್ಕಾರಿ ಜಾಗೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಾರ್ವಜನಿಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ದೇವಗಿರಿ ಗ್ರಾಮದ ಗಿರಿಮಲ್ಲೇಶ್ವರ ಗುಡ್ಡದ ಸರ್ಕಾರಿ ಜಾಗೆಯಲ್ಲಿ 30-40ವರ್ಷದಿಂದ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದು, ಗ್ರಾಪಂನವರು ವಿದ್ಯುತ್‌, ಕುಡಿಯುವ ನೀರಿನ ಸೌಲಭ್ಯ, ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ಹೀಗಾಗಿ ಅಕ್ರಮ ಇರುವುದನ್ನು ಸಕ್ರಮಗೊಳಿಸಿ ಪಟ್ಟಾ ನೀಡಬೇಕು. ನಾಗನೂರು ಗ್ರಾಮದಲ್ಲಿ ವರದಾ ನದಿ ನೆರೆ ಬಂದು ಕೆಲವರು ಮನೆ ಕಳೆದುಕೊಂಡಿದ್ದಾರೆ. ಅವರನ್ನು ಬೇರೆಡೆ ಸ್ಥಳಾಂತರಿಸುವ ಅವಶ್ಯಕತೆ ಇದೆ. ಗ್ರಾಮದಲ್ಲಿರುವ ಸರ್ಕಾರಿ ಜಾಗೆಯಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಬೇಕು. ಸರ್ಕಾರ ಮನೆ ನಿರ್ಮಿಸಿಕೊಳ್ಳಲು ಈಗಾಗಲೇ 5 ಲಕ್ಷ ರೂ., ಘೋಷಣೆ ಮಾಡಿ 1ಲಕ್ಷ ರೂ., ಕೊಟ್ಟಿದೆ. ಆದರೆ, ಮನೆ ನಿರ್ಮಿಸಿಕೊಳ್ಳಲು ಜಾಗೆ ಇಲ್ಲದೇ ಸಂತ್ರಸ್ತರು ಪರದಾಡುತ್ತಿದ್ದಾರೆ. ಕೂಡಲೇ ಮನೆ ನಿರ್ಮಿಸಿಕೊಳ್ಳಲು ಜಾಗೆ ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಬೆಳೆವಿಮೆ, ಬೆಳೆನಷ್ಟ ಪರಿಹಾರದ ಹಣ ಸರಿಯಾಗಿ ವಿತರಣೆಯಾಗಿಲ್ಲ, ಮನೆ ಬಿದ್ದ ಅರ್ಹ ಫಲಾನುಭವಿಗಳಿಗೆ ಪರಿಹಾರ ಸಿಕ್ಕಿಲ್ಲ. ಜಿಲ್ಲಾ ಧಿಕಾರಿಗಳು ಕೂಡಲೇ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನಹರಿಸಿ ಸರಿಪಡಿಸಬೇಕು. ಜಿಲ್ಲೆಯಲ್ಲಿ ಬ್ಯಾಂಕ್‌ ಅಧಿಕಾರಿಗಳು ಸಾಲಮರುಪಾವತಿಗೆ ಒತ್ತಾಯಿಸಿ ರೈತರಿಗೆ ನೋಟಿಸ್‌ ನೀಡುತ್ತಿದ್ದು, ಅಂತಹ ಬ್ಯಾಂಕ್‌ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್‌ಗಳು ಹಳೆಯದಾಗಿದ್ದು, ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಹೀಗಾಗಿ ಪ್ರಯಾಣಿಕರಿಗೆ, ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕಾರಣ ಸರಿಯಾಗಿ ದುರಸ್ತಿ ಪಡಿಸಿ ಬಸ್‌ಗಳನ್ನು ಓಡಿಸಬೇಕು ಎಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು.

ಸಂಘಟನೆಯ ಪ್ರಮುಖರಾದ ಹನುಮಂತಪ್ಪ ಹುಚ್ಚಣ್ಣನವರ, ಮಾಲತೇಶ ಪೂಜಾರ, ಹಾಸೀಂ ಜಿಗಳೂರು, ಲೋಕೇಶ ಕುಬಸದ, ಭುವನೇಶ್ವರ ಶಿಡ್ಲಾಪುರ ಇತರರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next