ಧಾರವಾಡ: ಏಜೆಂಟರ ಹಾವಳಿ ಹಾಗೂ ಸ್ವಚ್ಛತೆ ನಿರ್ವಹಣೆ ಸೇರಿದಂತೆ ಜಿಲ್ಲಾಸ್ಪತ್ರೆಯಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಇದನ್ನು ಮಾದರಿ ಆಸ್ಪತ್ರೆ ಮಾಡಲು ಡಿಎಚ್‌ಒ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದ್ದೇನೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.
ರೋಗಿಗಳು ಮತ್ತು ಅವರ ಸಂಬಂಧಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಶುಕ್ರವಾರ ದಿಢೀರ್ ಭೇಟಿಕೊಟ್ಟು ಅವರು ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೆ. ಆಸ್ಪತ್ರೆಯ ಪರಿಕರ, ಸೇವೆಯ ಬಗ್ಗೆ ಮೆಚ್ಚುಗೆ ಇದೆ. ಆದರೆ ಆಗಸ್ಟ್ ಅಂತ್ಯಕ್ಕೆ ಮತ್ತೊಮ್ಮೆ ಭೇಟಿ ನೀಡುತ್ತೇನೆ. ಸಮಸ್ಯೆಗಳು ಮುಂದುವರಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಜನ ಸಂಜೀವಿನಿ ಮಳಿಗೆಯಲ್ಲಿ ಔಷಧ ಸಿಗುತ್ತಿಲ್ಲ ಎಂಬ ದೂರುಗಳಿವೆ. ಇದರಿಂದಾಗಿ ಬಡ ರೋಗಿಗಳು ಹೊರಗಡೆ ಔಷಧಿ ಪಡೆಯಬೇಕಾಗುತ್ತಿದೆ. ಅಲ್ಲದೇ ರೋಗಿಗಳನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಕಳಿಸುತ್ತಿರುವುದು ಹಾಗೂ ಏಜೆಂಟರ ಹಾವಳಿಯ ದೂರುಗಳಿವೆ. ಇದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸರ್ಜನ್ ಗಿರಿಧರ ಅವರಿಗೆ ದೇಸಾಯಿ ಸೂಚಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಗಿರಿಧರ ಕುಕನೂರ ಅವರೊಂದಿಗೆ ಕೆಲಕಾಲ ಚರ್ಚಿಸಿದ ಶಾಸಕರು, ಆಸ್ಪತ್ರೆಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಸಿಬ್ಬಂದಿ, ಖಾಲಿ ಹುದ್ದೆಗಳು, ಸಿಟಿ ಸ್ಕ್ಯಾನ್ ಘಟಕ, ಜನ ಸಂಜೀವಿನಿ ಔಷಧ ಮಳಿಗೆ, ಡಯಾಲಿಸಿಸ್ ಘಟಕದ ನಿರ್ವಹಣೆ, ರಕ್ತ ಭಂಡಾರ, ಕಾನೂನು ಸಲಹಾ ಕೇಂದ್ರಗಳ ಕಾರ್ಯವೈಖರಿಯ ಬಗ್ಗೆ ಡಾ| ಗಿರಿಧರ ಮಾಹಿತಿ ನೀಡಿದರು. ಏಜೆಂಟರ ಹಾವಳಿಯ ಬಗ್ಗೆ ದೂರುಗಳು ಬಂದರೆ ತಕ್ಷಣವೇ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಡಾ|ಗಿರಿಧರ ಕುಕನೂರು ಶಾಸಕರಿಗೆ ಭರವಸೆ ನೀಡಿದರು.
ಸತತ ಮಳೆಯಿಂದಾಗಿ ನಗರದ ರಸ್ತೆಗಳು ಇದೀಗ ಹದಗೆಟ್ಟು ಹೋಗಿವೆ. ಇವುಗಳನ್ನು ಕೂಡಲೇ ದುರಸ್ತಿ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು.
ಅಮೃತ ದೇಸಾಯಿ, ಶಾಸಕ