Advertisement

ಶೀಘ್ರ ದುರಸ್ತಿಯಾಗದಿದ್ದರೆ ಪ್ರತಿಭಟನೆ

09:40 AM Mar 25, 2022 | Team Udayavani |

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪರಿಣಾಮ ಮೆಲ್ಕಾರ್‌ನಲ್ಲಿ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿ ನೀರಿನ ಸಮಸ್ಯೆ ಎದುರಾಗಿದ್ದು, ಎನ್‌ಎಚ್‌ಎಐ ನವರು ಹೆದ್ದಾರಿ ಗುತ್ತಿಗೆ ಸಂಸ್ಥೆಯಿಂದ ಶೀಘ್ರ ಪೈಪ್‌ ಲೈನ್‌ ದುರಸ್ತಿ ಮಾಡಿಸದೆ ಇದ್ದರೆ ಪುರಸಭೆ ಆಡಳಿತ ಮಂಡಳಿಯು ಕಾಮಗಾರಿಯ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಬಂಟ್ವಾಳ ಪುರಸಭೆ ಅಧ್ಯಕ್ಷ ಮಹಮ್ಮದ್‌ ಶರೀಫ್‌ ಎಚ್ಚರಿಸಿದರು.

Advertisement

ಅವರು ಬಂಟ್ವಾಳ ಪುರಸಭೆಯಲ್ಲಿ ಹೆದ್ದಾರಿ ಕಾಮಗಾರಿಯ ಪರಿಣಾಮ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿರುವ ಕುರಿತು ಪುರಸಭೆ, ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು.

ಹೆದ್ದಾರಿ ಪ್ರಾಧಿಕಾರನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು, ಬಂಟ್ವಾಳ ಪುರಸಭೆ ನೀರಿನ ಹಳೆಯ ಪೈಪ್‌ಲೈನ್‌ ಹಾಗೂ ನಗರ ನೀರು ಸರಬರಾಜು ಮಂಡಳಿಯವರ ಪೈಪ್‌ಲೈನ್‌ಗೂ ಹಾನಿ ಯಾಗಿ ಸಮಸ್ಯೆ ಎದುರಾಗಿದ್ದು, ನಮಗೆ ಜನರ ಹಿತಾಸಕ್ತಿಯೇ ಮುಖ್ಯ. ಕಾಮಗಾರಿ ನಡೆಯುವಲ್ಲಿ ನಿಲ್ಲುವುದು ಬಿಟ್ಟು ನೀವು ಮಂಗಳೂರು ಕಚೇರಿಯಲ್ಲಿ ಕುಳಿತುಕೊಳ್ಳುತ್ತೀರಿ. ಜನರಿಗೆ ನಾವು ಉತ್ತರ ಕೊಡಬೇಕು. ಹೀಗಾಗಿ ಹಾನಿಯಾಗಿರುವ ಪೈಪ್‌ಲೈನ್‌ ಶೀಘ್ರ ದುರಸ್ತಿಯಾಗಬೇಕು ಎಂದು ಆಗ್ರಹಿಸಿದರು.

ರಾ. ಹೆದ್ದಾರಿ ಪ್ರಾಧಿಕಾರದ ಸಹಾಯಕ ಹೆದ್ದಾರಿ ಎಂಜಿನಿಯರ್‌ ಲಿಖೀತ್‌ ಡಿ.ಎಸ್‌. ಪ್ರತಿಕ್ರಿಯಿಸಿ, ಪೈಪ್‌ಲೈನ್‌ ಸ್ಥಳಾಂತರಿಸುವ ಕುರಿತು ಪುರಸಭೆ ನೀಡಿರುವ ಕ್ರಿಯಾ ಯೋಜನೆಯನ್ನು ಗುತ್ತಿಗೆ ಸಂಸ್ಥೆಗೆ ನೀಡಲಾಗಿದೆ. ಅವರಿಂದಲೇ ಕಾಮಗಾರಿ ಮಾಡಿಸುತ್ತೇವೆ ಎಂದರು.

ಪುರಸಭೆ ಎಂಜಿನಿಯರ್‌ ಡೊಮಿನಿಕ್‌ ಡಿ’ಮೆಲ್ಲೊ ಮಾತನಾಡಿ, ಕಳೆದ ಹಲವು ಸಮಯಗಳಿಂದ ನೀರಿನ ತೊಂದರೆ ಎದುರಾಗಿದ್ದು, ಈ ಹಿಂದೆ 8-10 ದಿನಗಳ ಕಾಲ ನೀರಿಲ್ಲದಂತಾಗಿದೆ. ನೀರಿನ ಪೈಪ್‌ ಲೈನಿಗೆ ಹಾನಿಯಾದರೆ 24 ಗಂಟೆಗಳಲ್ಲಿ ಅದನ್ನು ದುರಸ್ತಿ ಮಾಡಿಸಬೇಕು. ನೀವು ಕಾಮಗಾರಿ ಆರಂಭಿಸುವ ವೇಳೆ ನಮ್ಮ ಪ್ಲಂಬರ್‌ ಅನ್ನು ಸಂಪರ್ಕಿಸಿದ್ದರೆ ತೊಂದರೆ ಆಗುತ್ತಿರಲಿಲ್ಲ. ನಿಮ್ಮ ಕಾಮಗಾರಿಯ ವೇಳೆ ಪೈಪ್‌ಲೈನ್‌ಗೆ ಹಾನಿಯಾಗಿ ನೀರು ಪೂರೈಕೆಗೆ ತೊಂದರೆಯಾದರೆ, ನಿಮ್ಮ ಮೊತ್ತದಲ್ಲೇ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಬೇಕು ಎಂದು ಸೂಚಿಸಿದರು.

Advertisement

ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜಾ ಹಾಗೂ ಸದಸ್ಯೆ ಗಾಯತ್ರಿ ಪ್ರಕಾಶ್‌ ಮಾತನಾಡಿ, ನಿಮ್ಮ ಕಾಮಗಾರಿಗೆ ಅನಗತ್ಯ ಅಡ್ಡಿ ಪಡಿಸುವುದಿಲ್ಲ. ಎಚ್ಚರಿಕೆ ವಹಿಸು ವುದು ನಿಮ್ಮ ಜವಾಬ್ದಾರಿ ಎಂದರು. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಸಿಬಂದಿ ಮೀನಾಕ್ಷಿ ಉಪಸ್ಥಿತರಿದ್ದರು.

ಪುರಸಭೆಯ ಗಮನಕ್ಕೆ ತಂದಿಲ್ಲ

ಸದಸ್ಯ ಅಬೂಬಕ್ಕರ್‌ ಸಿದ್ದಿಕ್‌ ಮಾತನಾಡಿ, ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಹೆದ್ದಾರಿ ಕಾಮಗಾರಿ ಆರಂಭಿಸುವ ವಿಚಾರವನ್ನು ಎನ್‌ಎಚ್‌ಎಐನವರು ಪುರಸಭೆಯ ಆಡಳಿತ ಮಂಡಳಿ, ಅಧಿಕಾರಿಗಳು, ಸದಸ್ಯರ ಗಮನಕ್ಕೆ ತಂದಿಲ್ಲ. ಗಮನಕ್ಕೆ ತಂದಿದ್ದರೆ ಪುರಸಭೆಯ ನೀರಿನ ಪೈಪುಲೈನ್‌ ಎಲ್ಲಿದೆ ಎಂದು ಗುರುತು ಮಾಡಿ ಅವುಗಳಿಗೆ ಹಾನಿಯಾಗದಂತೆ ಕ್ರಮವಹಿಸಬಹುದಿತ್ತು ಎಂದರು.

ಗುತ್ತಿಗೆದಾರರಿಂದಲೇ ನಿರ್ವಹಣೆ

ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಎಂಜಿನಿಯರ್‌ ಶೋಭಾಲಕ್ಷ್ಮೀ ಮಾತನಾಡಿ, ಹೆದ್ದಾರಿ ಕಾಮಗಾರಿಯ ವೇಳೆ ಪೈಪ್‌ಲೈನ್‌ಗೆ ಹಾನಿಯಾದರೆ ನಮ್ಮಿಂದ ಕ್ರಿಯಾಯೋಜನೆ ಪಡೆದು ಗುತ್ತಿಗೆದಾರರೆ ಕಾಮಗಾರಿ ನಿರ್ವಹಿಸಬೇಕು. ಇಲ್ಲಿ ಜನರಿಗೆ ತಪ್ಪು ಮಾಹಿತಿ ಹೋಗಿ ನಾವೇ ಕಾಮಗಾರಿ ಮಾಡಿಲ್ಲ ಎಂದು ನಮ್ಮ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದರು.

ಪುರಸಭಾ ವ್ಯಾಪ್ತಿಯ ಉಪ್ಪುಗುಡ್ಡೆ-ಶಾಂತಿಗುಡ್ಡೆ ನೀರಿನ ರೈಸಿಂಗ್‌ ಲೈನ್‌ ದುರಸ್ತಿಯ ಕುರಿತು ಈಗಾಗಾಲೇ ಕ್ರಿಯಾಯೋಜನೆ ನೀಡಿದ್ದೇವೆ. ಹೆದ್ದಾರಿ ಹಿಂದಿನ ಗುತ್ತಿಗೆದಾರರಿಗೆ 226 ಲಕ್ಷ ರೂ.ಗಳಿಗೆ ಕ್ರಿಯಾಯೋಜನೆ ನೀಡಲಾಗಿದ್ದು, ಜತೆಗೆ ಅವರು 10 ಲಕ್ಷ ರೂ.ಮೇಲ್ವಿಚಾರಣಾ ಮೊತ್ತ ಪಾವತಿಸಿದ್ದಾರೆ. ಬಳಿಕ 40 ಲಕ್ಷ ರೂ.ಗಳ 2ನೇ ಕ್ರಿಯಾ ಯೋಜನೆ ನೀಡಿದ್ದು, ಮುಂದೆ 226 ಲಕ್ಷ ರೂ.ಗಳ ಮೂರನೇ ಕ್ರಿಯಾಯೋಜನೆ ನೀಡಿದ್ದೇವೆ. ಅದರ ಕಾಮಗಾರಿಯನ್ನು ಗುತ್ತಿಗೆದಾರರೆ ನಿರ್ವಹಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next