ಮಂಗಳೂರ: ಹಿಂದೂ ಕಾರ್ಯಕರ್ತ ದೀಪಕ್ ರಾವ್ ಕೊಲೆ ಯನ್ನು ಖಂಡಿಸಿ ಹಾಗೂ ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ವಿಹಿಂಪ ಹಾಗೂ ಬಜರಂಗದಳದ ನೇತೃತ್ವದಲ್ಲಿ ಮಂಗಳೂರಿನ ಬೆಸೆಂಟ್ ವೃತ್ತದಲ್ಲಿ ಬಿಜೆಪಿ ಸಹಯೋಗದೊಂದಿಗೆ ಶುಕ್ರವಾರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ರಸ್ತೆ ತಡೆ ನಡೆಸಿದ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದರು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಮಾತನಾಡಿ, ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಮುಸ್ಲಿಂ ಸಂಘಟನೆಗಳೇ ಕಾರಣ. ಇದಕ್ಕೆ ಸರಕಾರದ ಬೆಂಬಲವೂ ಇದೆ. ಹಿಂದೂ ಯುವಕರನ್ನು ಗುರಿಯನ್ನಾಗಿಸಿ ಕೊಲೆಗಳು ನಡೆಯುತ್ತಿವೆ. ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳನ್ನು ತತ್‌ಕ್ಷಣ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ರಾಜ್ಯ ಸರಕಾರ ಹಿಂದೂ ದಮನಕಾರಿ ನೀತಿ ಯನ್ನು ಅನುಸರಿಸುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಸಚಿವ ಯು.ಟಿ. ಖಾದರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವೇದವ್ಯಾಸ ಕಾಮತ್, ಮುಖಂಡ ರಾದ ಬದ್ರಿನಾಥ್ ಕಾಮತ್, ಜಗದೀಶ್ ಶೇಣವ, ಶರಣ್ ಪಂಪ್‌ವೆಲ್, ರಾಜಗೋಪಾಲ ರೈ, ಪೂರ್ಣಿಮಾ, ಪೂಜಾ ಪೈ, ರಾಮಚಂದ್ರ ಬೈಕಂಪಾಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಉಡುಪಿ ಜಿಲ್ಲೆ
ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಉಪ್ಪುಂದದಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.