ಬೀದರ: ಎ.ಜೆ. ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಒಪ್ಪಿಕೊಂಡು ಕೇಂದ್ರ ಸರ್ಕಾರಕ್ಕೆ ಸಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಗುರುವಾರ ನಗರದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ವರದಿ ಜಾರಿ ಹೋರಾಟ ಸಮಿತಿ ಸಂಚಾಲಕ ಫರ್ನಾಂಡಿಸ್ ಹಿಪ್ಪಳಗಾಂವ ಮತ್ತು ಎಂಆರ್ ಎಚ್‌ಎಸ್ ಜಿಲ್ಲಾಧ್ಯಕ್ಷ ರಾಜು ಕಡ್ಯಾಳ ನೇತೃತ್ವದಲ್ಲಿ ಸಮಾಜ ಬಾಂಧವರು ನಗರದ ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಶೋಷಿತ, ಅಸ್ಪೃಶ್ಯ ಸಮುದಾಯಗಳಾದ ಹೊಲ ಮಾದಿಗರು ಮತ್ತು ಸಂಬಂಧಿತ ಜಾತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ವಿಶೇಷ ಯೋಜನೆಗಳು ಸಮರ್ಪಕವಾಗಿ ಜಾರಿಯಾಗದಿರುವುದು, ಈ ಸಮುದಾಯಗಳನ್ನು ಮತ್ತಷ್ಟು ತುಳಿಯುವ ಹುನ್ನಾರದಿಂದ ದೇಶದ ಯಾವುದೇ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿಲ್ಲದ ಸ್ಪರ್ಶ ಜಾತಿಗಳಾದ ಭೋವಿ, ವಡ್ಡರ, ಲಮಾಣಿ, ಕೊಂಚ ಮತ್ತು ಕೋರಮ ಅವರನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸಿರುವುದರಿಂದ ಮೀಸಲಾತಿಯ ಸಿಂಹ ಪಾಲು ಪಡೆಯುತ್ತಿದ್ದು, ಹೊಲೆ ಮಾದಿಗ ಮತ್ತು ಸಂಬಂಧಿತ ಸಮುದಾಯಗಳು ರಾಜಕೀಯ, ಸಮಾಜಿಕ, ಆರ್ಥಿಕವಾಗಿ ಅನ್ಯಾಯಕ್ಕೆ ಒಳಗಾಗುತ್ತಿವೆ ಎಂದು ತಿಳಿಸಲಾಗಿದೆ.
ಮೀಸಲಾತಿ ವರ್ಗೀಕರಣಕ್ಕಾಗಿ ಹೋರಾಟ ಪ್ರಾರಂಭವಾಗಿ ಸುಮಾರು 21ವರ್ಷ. ನ್ಯಾ|ಸದಾಶಿವ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿ 6 ವರ್ಷ ಕಳೆದಿವೆ. ಇದಕ್ಕಾಗಿ ಹೋರಾಟಗಳು ನಿರಂತರವಾಗಿ ನಡೆಯುತ್ತ ಬಂದಿವೆ. ಆದರೂ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮೀನಮೇಷ, ವಿಳಂಬಧೋರಣೆ ಮಾಡುತ್ತ ದಲಿತ, ಮಾದಿಗ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.