ಹೊಸಪೇಟೆ: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕಳೆದ 2016ರಲ್ಲಿ ನೋಟು ಅಮ್ಯಾನೀಕರಣದಿಂದ ಸರಕು ಸೇವಾ ತೆರಿಗೆ ನೀತಿಯಿಂದ ದೇಶವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ನಂತರ ಕೊರೊನಾದಿಂದ ಕಾರ್ಮಿಕ ಕ್ಷೇತ್ರ ಮತ್ತಷ್ಟು ಸಂಕಷ್ಟಕ್ಕೆ ಇಳಿಯಿತು. ತೈಲ ಬೆಲೆ ಏರಿಕೆಯಿಂದ ಕಟ್ಟಡ ನಿರ್ಮಾಣದ ಮೇಲೆ ಹಲವು ಸಮಸ್ಯೆಗಳು ಉದ್ಭವವಾದವು. ದೇಶದಲ್ಲಿ ಕಾರ್ಮಿಕ ವಲಯದಲ್ಲಿ ಅಂದಾಜು 10 ಕೋಟಿ ಜನರು ಉದ್ಯೋಗ ಮಾಡುತ್ತಿದ್ದಾರೆ. ಆದರೆ ಕೊರೊನಾದಿಂದ ಆದ ಸಂಕಷ್ಟ ಕೊರೊನಾ ನಂತರವು ದೂರವಾಗಿಲ್ಲ. ರಾಜ್ಯದಲ್ಲಿ ಇನ್ನಷ್ಟು ಬಿಕ್ಕಟ್ಟಿಗೆ ದೂಡಿದೆ. ಬೆಂಗಳೂರಿನಲ್ಲಿ ಹೋರಾಟ ಮಾಡುವ ವೇಳೆ ರಾಜ್ಯ ಸರ್ಕಾರ ಈ ಹಿಂದೆ ವಿವಿಧ ಸೌಲಭ್ಯಗಳನ್ನು ಘೋಷಣೆ ಮಾಡಿತು. ಬಾಕಿ ಇರುವ ಕಾರ್ಮಿಕರ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಕಚೇರಿಯಲ್ಲಿ ನಡೆದ ಸಭೆಯಲ್ಲಿನ ತೀರ್ಮಾನಗಳನ್ನು ಜಾರಿಗೊಳಿಸಬೇಕು. ಕಾರ್ಮಿಕ ಕಲ್ಯಾಣಕ್ಕಾಗಿ ಸರ್ಕಾರ ಶ್ರಮಿಸಬೇಕಿದೆ ಎಂದು ಒತ್ತಾಯಿಸಿದರು.
ಕಾರ್ಮಿಕರಿಗೆ 3 ಸಾವಿರ ರೂ. ಕೊರೋನಾ ಪರಿಹಾರ ಪಾವತಿಸಬೇಕು. ಫಲಾನುಭವಿ ಕಾರ್ಮಿಕರಿಗೆ ಕೊರೊನಾ ಕಿಟ್ ಬದಲು ಅವರ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಂತೆ ಮನವಿ ಮಾಡಿದರೂ ಕಿಟ್ ಕೊಟ್ಟು ಅಕ್ರಮ ನಡೆಸಲಾಗಿದೆ. ಅಕ್ರಮ ನಡೆಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಕೊರೊನಾದಿಂದ ಮೃತಪಟ್ಟ ಕಾರ್ಮಿಕರಿಗೆ ವಿಶೇಷ ಪರಿಹಾರ ನೀಡಿ, ಗುಣಮುಖರಾದವರಿಗೆ ವೈದ್ಯಕೀಯ ವೆಚ್ಚ ಭರಿಸಬೇಕು. ಕಾರ್ಮಿಕ ಇಲಾಖೆಯಿಂದ ಅಕ್ರಮ ನಕಲಿ ಕಾರ್ಮಿಕ ಕಾರ್ಡ್ ವಿತರಿಸಲಾಗುತ್ತಿದ್ದು, ಇದನ್ನು ತಡೆದು ಸೂಕ್ತ ಕ್ರಮಕೈಗೊಳ್ಳಬೇಕು. ಕಾರ್ಮಿಕರ ನಿಧಿಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಬೇಕು ಎಂದು ಆಗ್ರಹಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಜಗನಾಥ, ಕಾರ್ಯದರ್ಶಿ ಎನ್. ಯಲ್ಲಾಲಿಂಗ, ಸಿಐಟಿಯುನ ಅಧ್ಯಕ್ಷ ಭಾಸ್ಕರ್ ರೆಡ್ಡಿ, ಮುಖಂಡರಾದ ಎಂ.ಗೋಪಾಲ್, ಹೇಮಂತ್ ನಾಯಕ, ಶಂಕರ್, ಕರಿಯಣ್ಣ ಮತ್ತಿತರರಿದ್ದರು.