Advertisement

ಕೆಎಎಸ್‌ ಅಭ್ಯರ್ಥಿಗಳಿಂದ ಪ್ರತಿಭಟನೆ 

08:10 AM Oct 13, 2018 | Team Udayavani |

ಬೆಂಗಳೂರು: 2015ನೇ ಸಾಲಿನ ಕೆಎಎಸ್‌ ಮುಖ್ಯ ಪರೀಕ್ಷೆಯ ಫ‌ಲಿತಾಂಶ ಪ್ರಕಟಿಸುವಂತೆ ಆಗ್ರಹಿಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕೇಂದ್ರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಮುಖ್ಯ ಪರೀಕ್ಷೆ ನಡೆದು ಹತ್ತು ತಿಂಗಳು ಮುಗಿದರೂ ಫ‌ಲಿತಾಂಶ ಪ್ರಕಟಿಸದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೆಪಿಎಸ್‌ಸಿಗೆ ಹಿಡಿ ಶಾಪ ಹಾಕಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಅಭ್ಯರ್ಥಿಗಳು ಕೆಪಿಎಸ್‌ಸಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪರೀಕ್ಷಾ ವಿಭಾಗದ ವಿರುದ್ಧ ಧಿಕ್ಕಾರ ಕೂಗಿದರು. ಕೆಎಎಸ್‌ ಅಧಿಕಾರಿಗಳಾಗಬೇಕು ಎಂಬ ಕನಸು ಹೊತ್ತು ಕಷ್ಟಪಟ್ಟು ಪರೀಕ್ಷೆ ಬರೆದ ನಮ್ಮ ಭವಿಷ್ಯದ ಜೊತೆಗೆ ಕೆಪಿಎಸ್‌ಸಿ ಚೆಲ್ಲಾಟವಾಡುತ್ತಿದೆ. ಮುಖ್ಯ ಪರೀಕ್ಷೆ ನಡೆದು 10 ತಿಂಗಳು ಆಗಿದ್ದರೂ ಇಲ್ಲಿತನಕ ಫ‌ಲಿತಾಂಶ ಪ್ರಕಟಿಸಿಲ್ಲ. ವಯೋಮಿತಿ ಮೀರಿ ಹೋಗುವ ಆತಂಕ ನಮ್ಮನ್ನು ಕಾಡುತ್ತಿದ್ದು, ಈ ಅತಂತ್ರ ಸ್ಥಿತಿಗೆ ಕೆಪಿಎಸ್‌ಸಿ ನೇರ ಹೊಣೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಏನಿದು ಫ‌ಲಿತಾಂಶ ವಿವಾದ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2015ನೇ ಸಾಲಿನ 428 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ 2017ರ ಆಗಸ್ಟ್‌ನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಪೂರ್ವಭಾವಿ ಪರೀಕ್ಷೆಯ ಫ‌ಲಿತಾಂಶದ ಬಳಿಕ 8ಸಾವಿರ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದರು. ಅದರಂತೆ 2017ರ ಡಿಸೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಈಗ ಮುಖ್ಯ ಪರೀಕ್ಷೆ ನಡೆದ
10ತಿಂಗಳು ಕಳೆದರೂ ಕೆಪಿಎಸ್‌ಸಿ ಫ‌ಲಿತಾಂಶ ಪ್ರಕಟಿಸಿಲ್ಲ. ಇದು ಅಭ್ಯರ್ಥಿಗಳ ಅಕ್ರೋಶಕ್ಕೆ ಕಾರಣವಾಗಿದೆ.

ಹೂಟಾ ಸಮಿತಿ ಶಿಫಾರಸು ಲೆಕ್ಕಕ್ಕಿಲ್ಲ: ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಗೆ ಕಾಯಕಲ್ಪ ನೀಡಲು ಸರ್ಕಾರವೇ ರಚಿಸಿದ ಹೂಟಾ ಸಮಿತಿಯ ಶಿಫಾರಸುಗಳೇ ಲೆಕ್ಕಕ್ಕಿಲ್ಲದಂತಾಗಿದೆ. ಖಾಲಿ ಹುದ್ದೆಗಳ ಭರ್ತಿಗೆ ಪ್ರತಿ ವರ್ಷ ಅಧಿಸೂಚನೆ ಹೊರಡಿಸಬೇಕು. ಎಲ್ಲ ಇಲಾಖೆಗಳು ಪ್ರತಿ ವರ್ಷ ನವೆಂಬರ್‌ ಅಥವಾ ಡಿಸೆಂಬರ್‌ನೊಳಗೆ ಖಾಲಿ ಹುದ್ದೆಗಳ ಪಟ್ಟಿಯನ್ನು ಆಡಳಿತ ಮತ್ತು ಸಿಬ್ಬಂದಿ ಇಲಾಖೆಗೆ ಕಳುಹಿಸಿಕೊಡಬೇಕು. ಜನವರಿ ವೇಳೆಗೆ ಈ ಪಟ್ಟಿ ಕೆಪಿಎಸ್‌ಸಿಗೆ ರವಾನೆಯಾಗಬೇಕು. ಫೆಬ್ರವರಿಗೆ ಅಧಿಸೂಚನೆ ಹೊರಡಿಸಿ, 6ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೂಟಾ ಸಮಿತಿ ಶಿಫಾರಸು ಮಾಡಿದೆ. ಆದರೆ 2011ರಿಂದ ಇಲ್ಲಿವರೆಗೆ ಕೇವಲ ಎರಡು ಬಾರಿ ಮಾತ್ರ ಕೆಎಎಸ್‌ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. 2015ನೇ ಸಾಲಿನ ನೇಮಕಾತಿ ನನೆಗುದಿಗೆ ಬಿದ್ದಿದೆ. ಇದರಿಂದಾಗಿ 2016 ಮತ್ತು 2107ನೇ ಸಾಲಿನ ಹುದ್ದೆಗಳ ಭರ್ತಿಗೆ
ಇಲ್ಲಿತನಕ ಅಧಿಸೂಚನೆ ಪ್ರಕಟಗೊಂಡಿಲ್ಲ. 

ಪ್ರತಿಕ್ರಿಯೆಗೆ ಸಿಗದ ಕಾರ್ಯದರ್ಶಿ: ಪರೀಕ್ಷೆ, ಫ‌ಲಿತಾಂಶ ಇದ್ಯಾವ ವಿಚಾರವೂ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬರುವುದಿಲ್ಲ, ಕಾರ್ಯದರ್ಶಿ ಯವರನ್ನು ಕೇಳಬೇಕು ಎಂದು ಕೆಪಿಎಸ್ಸಿ ಅಧ್ಯಕ್ಷರು ಹೇಳುತ್ತಾರೆ. ಹಾಗಾಗಿ, ಕಾರ್ಯದರ್ಶಿಯರವನ್ನು ಸಂಪರ್ಕಿಸಲು
ಪ್ರಯತ್ನಿಸಿದಾಗ ಕಾರ್ಯದರ್ಶಿ ಆರ್‌.ಆರ್‌. ಜನ್ನು ಫೋನ್‌ ಕರೆ ಸ್ವೀಕರಿಸಿಲ್ಲ, ಮೆಸೇಜ್‌ಗೆ ಉತ್ತರ ನೀಡಿಲ್ಲ. ಮೇಲಾಗಿ ಕೆಪಿಎಸ್ಸಿ ಕಚೇರಿಗೆ ನಿರ್ಬಂಧಿತ ಪ್ರವೇಶವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next