ಜೇವರ್ಗಿ: ಅಧಿಕಾರಿಗಳ ನಿರ್ಲಕ್ಷ್ಯದಿಂದ ನರೇಗಾ ಕಾರ್ಮಿಕರಿಗೆ ಜಾಬ್ ದೊರೆಯದೇ ಇದ್ದುದರಿಂದ ಕೆಲಸ ಸಿಗದೇ ಕಾರ್ಮಿಕರು ಪರದಾಡುವಂತಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಚಿತ್ತಾಪುರ ತಾಲೂಕು ಘಟಕದ ಅಧ್ಯಕ್ಷ ಸಾಯಬಣ್ಣ ಗುಡುಬಾ ಆರೋಪಿಸಿದರು.
ತಹಶೀಲ್ದಾರ್ ಕಚೇರಿ ಎದುರು ವಿವಿಧ ಬೇಡಿಕೆ ಈಡೇರಿಕೆಗಾಗಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ವತಿಯಿಂದ ನಡೆಸಲಾಗುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ, ಬೆಂಬಲ ಸೂಚಿಸಿ ಅವರು ಮಾತನಾಡಿದರು.
ಮೂರು ನಾಲ್ಕು ಕುಟುಂಬಗಳ ಸದಸ್ಯರನ್ನು ಒಂದೇ ಜಾಬ್‌ಕಾರ್ಡ್‌ನಲ್ಲಿ ಸೇರ್ಪಡೆ ಮಾಡಲಾಗಿದೆ. ಪರಿಣಾಮ 100 ಮಾನವ ದಿನಗಳು ದೊರೆಯುವ ಬದಲು ತಲಾ ಒಂದೇ ಕುಟುಂಬಕ್ಕೆ 40 ಮಾನವ ದಿನಗಳು ದೊರೆಯುತ್ತಿವೆ. ಹೀಗಾಗಿ ಪ್ರತಿ ಕುಟುಂಬಕ್ಕೊಂದು ಜಾಬ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಕಾರ್ಮಿಕರಿಗೆ 425ರೂ. ಕೂಲಿ ನಿಗದಿ ಮಾಡಿದೆ. ಆದರೆ, ನರೇಗಾ ಕಾರ್ಮಿಕರಿಗೆ 290ರೂ. ಕೂಲಿ ನೀಡಲಾಗುತ್ತಿದೆ. ಆದರೂ 9 ಗಂಟೆಯಿಂದ 4 ಗಂಟೆ ವರೆಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಈ ಆದೇಶ ತಕ್ಷಣ ಹಿಂದಕ್ಕೆ ಪಡೆಯಬೇಕು. ಪ್ರತಿ ಗ್ರಾಪಂನಲ್ಲಿ ನರೇಗಾ ಕೆಲಸವನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಪ್ರತಿ ಕುಟುಂಬಕ್ಕೆ ಪಡಿತರ ಚೀಟಿ ವಿತರಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಚಿತ್ತಾಪುರ ತಾಲೂಕು ಅಧ್ಯಕ್ಷೆ ಶೇಖಮ್ ಕುರಿ, ಪ್ರಾಂತ ರೈತ ಸಂಘ ಜೇವರ್ಗಿ ಘಟಕ ಅಧ್ಯಕ್ಷ ಸುಭಾಷ ಹೊಸಮನಿ, ಮಲಕಪ್ಪ ಹರನೂರ, ಶಂಕರಲಿಂಗ ರೇವನೂರ, ರೇವು ಜಾಧವ ರೇವನೂರ, ಶ್ರೀನಾಥ ಕೋಳಕೂರ, ರಾಜು ಸಾಥಖೇಡ, ಈರಣ್ಣ ರಾಠೊಡ, ನಾಗಮ್ಮ ಹನ್ನೂರ, ಮಲ್ಕಮ್ಮ ಬಳಬಟ್ಟಿ, ನಾಗಮ್ಮ ಬಿರಾದಾರ, ಸಿದ್ಧು ಮುತ್ತಕೋಡ, ಮಲ್ಲಿಕಾರ್ಜುನ ವರ್ಚನಳ್ಳಿ ಹಾಗೂ ನೂರಾರು ರೈತರು ಧರಣಿಯಲ್ಲಿ ಭಾಗವಹಿಸಿದ್ದರು.