ಮೈಸೂರು: ಕೆಆರ್‌ಎಸ್ ರೈಲ್ವೆ ನಿಲ್ದಾಣದಿಂದ ಸಾಗರಕಟ್ಟೆವರೆಗೆ ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ನಜರ್‌ಬಾದ್‌ನ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಕಚೇರಿ ಎದುರು ಧರಣಿ ನಡೆಸಿದ ಸಂಘದ ಕಾರ್ಯಕರ್ತರು, ಅಧಿಕಾರಿಗಳ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಆರ್‌ಎಸ್ ರೈಲ್ವೆ ನಿಲ್ದಾಣದಿಂದ ಸಾಗರಕಟ್ಟೆವರೆಗೆ ಇರುವ ಟರ್ಕಿ ಟ್ರಾವೆಲ್ಸ್ ರಸ್ತೆ ದ್ವಿಚಕ್ರವಾಹನಗಳೂ ಸಂಚರಿಸಲಾಗದಷ್ಟು ಹದಗೆಟ್ಟಿದೆ. ಈ ರಸ್ತೆ ಅಗಲೀಕರಣಗೊಳಿಸಿ ದುರಸ್ತಿಪಡಿಸುವಂತೆ ಒತ್ತಾಯಿಸಿ ಈ ಹಿಂದೆ ಧರಣಿ ನಡೆಸಿದಾಗ
-ಒಂದು ತಿಂಗಳೊಳಗಾಗಿ ರಸ್ತೆ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದ ಇಲಾಖೆ ಅಧಿಕಾರಿಗಳು ಈವರೆಗೂ ಆ ರಸ್ತೆ ದುರಸ್ತಿಪಡಿಸಿಲ್ಲ. ಕೂಡಲೇ ರಸ್ತೆ ಅಗಲೀಕರಣ ಮತ್ತು ದುರಸ್ತಿ ಮಾಡದಿದ್ದಲ್ಲಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಎಂ.ಎಸ್.ಅಶ್ವತ್ಥನಾರಾಯಣ ರಾಜೇಅರಸ್, ಎಚ್.ಸಿ.ಲೋಕೇಶ್ ರಾಜೇ ಅರಸ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ತಾಲೂಕು ಅಧ್ಯಕ್ಷ ಮರಂಕಯ್ಯ, ಆನಂದೂರು ಪ್ರಭಾಕರ್, ನಾಗನಹಳ್ಳಿ ಜಯೇಂದ್ರ, ಮಂಡಕಳ್ಳಿ ಮಹೇಶ್, ದಿನೇಶ್, ಚಂದ್ರಶೇಖರ್ ಮತ್ತಿತರರಿದ್ದರು.