ಬಸವನಬಾಗೇವಾಡಿ: ತಾಲೂಕಿನ ಕಾನ್ನಾಳ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಪಟ್ಟಣದ ತಾ.ಪಂ. ಕಚೇರಿ ಎದುರು ಗುರುವಾರದಿಂದ ಆರಂಭಿಸಿದ ಆಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಜಿ.ಪಂ. ಉಪಕಾರ್ಯದರ್ಶಿ ಸಿ.ಬಿ. ದೇವರಮನಿ ಭೇಟಿ ನೀಡಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸತ್ಯಾಗ್ರಹ ಅಂತ್ಯಗೊಳಿಸಲಾಯಿತು.
ಶುಕ್ರವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದ ಜಿ.ಪಂ. ಉಪಕಾರ್ಯದರ್ಶಿ ಸಿ.ಬಿ. ದೇವರಮನಿ ಪ್ರತಿಭಟನಾ ನಿರತರೊಂದಿಗೆ ಮಾತನಾಡಿ, ಈ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಕೂಡಲೇ ಕಾನೂನು ಸಲಹೆ ಪಡೆದು ಈ ಸಮಸ್ಯೆ ಇತ್ಯರ್ಥಗೊಳಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಕರವೇ ಜಿಲ್ಲಾ ಯುವ ಘಟಕ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ಕಾನ್ನಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಕಾನ್ನಾಳ ಗ್ರಾಮಕ್ಕೆ ಪೂರೈಸುವ ಕುಡಿಯುವ ನೀರಿನ ಕೊಳವೆ ಬಾವಿಯನ್ನು ಬಂದ್ ಮಾಡಿದ್ದು, ಆ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕು. ಅಧಿಕಾರಿಗಳ ಭರವಸೆ ಮೆರೆಗೆ ತಾತ್ಕಾಲಿಕವಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈ ಬಿಡಲಾಗುವುದು. ಶೀಘ್ರದಲ್ಲೇ ಸಮಸ್ಯೆ ಪರಿಹಾರ ಆಗದೆ ಹೋದಲ್ಲಿ ಮತ್ತೆ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ತಹಶೀಲ್ದಾರ್ ಎಂ.ಎನ್. ಬಳಿಗಾರ, ತಾ.ಪಂ. ಇ.ಒ. ಭಾರತಿ ಚಲುವಯ್ಯ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಎಇಇ ಎಸ್.ಬಿ. ಪಾಟೀಲ, ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ, ಪಿ.ಐ. ಬಸವರಾಜ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಧರಣಿಯಲ್ಲಿ ಗ್ರಾಮಸ್ಥರಾದ ಮಾದೇವಿ ಯರಝರಿ, ಲಕ್ಕವ್ವ ಮೇಲಿನಮನಿ, ಕಾಂತವ್ವ ನಾಟಿಕಾರ, ಸುವರ್ಣ ಮೇಲಿನಮನಿ, ಅಲಾಬಿ ಗುಂಡ್ನಾಳ, ಜನ್ನತಬಿ ಚಪ್ಪರಬಂದ್, ಅಲಾಬಿ ಚಪ್ಪರಬಂದ, ಗುರುಬಾಯಿ ನಾಟಿಕಾರ, ಈರವ್ವ ಕಲಬುರ್ಗಿ, ಲಕ್ಷ್ಮವ್ವ ಮ್ಯಾಗಿನಮನಿ, ಶ್ರೀಶೈಲ ಹೆಬ್ಟಾಳ, ಇಬ್ರಾಹಿಂ ಬೀಳಗಿ, ಸಿದ್ದಪ್ಪ ಹೂಗಾರ, ಸಂಗಪ್ಪ ಸಜ್ಜನ, ರವಿ ವಡ್ಡರ, ಸಿದ್ದಪ್ಪ ಮಾದರ, ಅರವಿಂದ ಹೂಗಾರ, ಮಹಾಂತೇಶ ನಾಟಿಕಾರ, ಸಾಹೇಬಗೌಡ ಮೇಟಿ, ಉಮೇಶ ವಾಲೀಕಾರ, ಶಾಹಿರಬಾನು ಚಪ್ಪರಬಂದ ಸೇರಿದಂತೆ ಅನೇಕರು ಧರಣಿಯಲ್ಲಿ ಭಾಗವಹಿಸಿದ್ದರು.