ಬೆಂಗಳೂರು: ಮಾತೃಪೂರ್ಣ ಯೋಜನೆ ಬದಲಿಗೆ ಮೊದಲಿದ್ದಂತೆ “ಟೇಕ್ ಹೋಂ’ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಅ.2ರಂದು ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಮಾತೃಪೂರ್ಣ ಯೋಜನೆ ಜಾರಿಗೆ ತಂದಿತ್ತು. ಈ ಮೂಲಕ ಗರ್ಭಿಣಿ- ಬಾಣಂತಿಯರಿಗೆ ಮಧ್ಯಾಹ್ನದ ಸಮಯದಲ್ಲಿ ಪೌಷ್ಟಿಕ ಆಹಾರ ನೀಡುವ ಮಹಾತ್ವಾಕಾಂಕ್ಷೆ ಸರ್ಕಾರದ್ದಾಗಿತ್ತು.
ಆದರೆ, ಯಾವ ಜಿಲ್ಲೆಗಳಲ್ಲೂ ಗರ್ಭಿಣಿ-ಬಾಣಂತಿಯರು ಊಟಕ್ಕಾಗಿ ಅಂಗನವಾಡಿಗೆ ಬರುತ್ತಿಲ್ಲ. ಅಲ್ಲದೇ ಅಂಗನವಾಡಿ ಕೇಂದ್ರಗಳಲ್ಲಿ ಮೂಲಸೌಕರ್ಯಗಳೇ ಇಲ್ಲ. ಹಲವೆಡೆ ಕಟ್ಟಡಗಳು ಸರಿಯಾಗಿಲ್ಲ. ಈ ವೇಳೆ ಮಾತೃಪೂರ್ಣ ಯೋಜನೆ ತಂದಿರುವುದು ಅವೈಜ್ಞಾನಿಕ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಅಧ್ಯಕ್ಷ ಜಿ.ಆರ್.ಶಿವಶಂಕರ್ ಮಾತನಾಡಿ, ಯೋಜನೆ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಸರ್ಕಾರ ಸಾಕಷ್ಟು ಅನುದಾನವನ್ನು ನೀಡಿಲ್ಲ. ಇದರಿಂದ ಅಂಗನವಾಗಿ ಕಾರ್ಯಕರ್ತರು ತಮ್ಮ ಕೈಯಿಂದ ಸ್ವಂತ ಹಣವನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಸಮಯಕ್ಕೆ ಸರಿಯಾಗಿ ಆ ಹಣವನ್ನು ಕೂಡ ವಾಪಸ್ ನೀಡುತ್ತಿಲ್ಲ.
ರಾಜ್ಯದ 60 ಸಾವಿರಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳ ಪೈಕಿ 30 ಸಾವಿರಕ್ಕೂ ಹೆಚ್ಚು ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ. 20 ಸಾವಿರ ಅಂಗನವಾಡಿ ಕೇಂದ್ರಗಳಿಗೆ 2ರಿಂದ 3 ಕಿ.ಮೀ ನಡೆದು ಬಂದು ಗರ್ಭಿಣಿ, ಬಾಣಂತಿಯರು ಊಟ ಮಾಡಬೇಕಾದ ಪರಿಸ್ಥಿತಿ ಇದೆ. ಇದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಫಲಾನುಭವಿಗಳಿಗೆ ಈ ಹಿಂದೆ ಇದ್ದಂತೆ ಟೇಕ್ ಹೋಂ ವ್ಯವಸ್ಥೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಬೃಹತ್ ಜಾಥಾ: ರಾಜ್ಯದ ಹಲವೆಡೆಯಿಂದ ಆಮಿಸಿದ ಸಹಸ್ರಾರು ಮಂದಿ ಅಂಗನವಾಡಿ ಕಾರ್ಯಕರ್ತರು ಬೆಳಗ್ಗೆ 10.30ಕ್ಕೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಆನಂದರಾವ್ ವೃತ್ತದ ಮಾರ್ಗವಾಗಿ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶಗೊಂಡರು.ರಾಜ್ಯದ ನಾಲ್ಕು ಅಂಗನವಾಡಿ ಸಂಘಟನೆಗಳು, ಕರ್ನಾಟಕ ಅಂಗನವಾಡಿ ನೌಕರರ ಸಂಯುಕ್ತ ಸಂಘರ್ಷ ಸಮಿತಿ ಮತ್ತಿತರ ಸಂಘಟನೆಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಯೋಜನೆ ಚೆನ್ನಾಗಿದೆ. ಆದರೆ, ಸೌಲಭ್ಯಗಳನ್ನು ಕೂಡ ಸರ್ಕಾರ ಕೊಡಬೇಕು. ದೂರದ ಜಾಗಗಳಿಂದ ಗರ್ಭಿಣಿಯರು, ಬಾಣಂತಿಯರು ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಎರಡೂ¾ರು ಕಿ.ಮೀ ಹೇಗೆ ಬರಲು ಸಾಧ್ಯ?. ಮೊಟ್ಟೆ ಖರೀದಿ ಇರಲಿ, ತರಕಾರಿ ಕೊಳ್ಳಲು ಸಹ ಹಣ ಕೊಟ್ಟಿಲ್ಲ.
-ಸುಲೋಚನಾ ಪಾಟೀಲ್, ಗದಗ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು.