ಕಲಬುರಗಿ: ಜೇವರ್ಗಿ ಠಾಣೆಯ ಪೊಲೀಸರು ಪಕ್ಷಪಾತ ನೀತಿ ಅನುಸರಿಸುತ್ತಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿಸಿ ಪ್ರಕರಣ ದಾಖಲಿಸುತ್ತಿದ್ದು, ತಾಲೂಕಿನಲ್ಲಿ ಅಂಥ ಕಾನೂನು ಜಾರಿಯಲ್ಲಿದೆ ಎಂದು ಶ್ರೀ ರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ, ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ಟೀಕಿಸಿದರು.
ಯಾವುದೇ ಹೋರಾಟಗಾರರು ಪೊಲೀಸರಿಗೆ ಪ್ರಶ್ನೆ ಮಾಡಿದರೆ ಅವರನ್ನು ಜೈಲಿಗೆ ಕಳುಹಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯು ತನ್ನ ಕಾರ್ಯವನ್ನೇ ಮರೆತ್ತಿದ್ದರಿಂದ ಸಿಪಿಐ ಹಾಗೂ ಪಿಎಸ್‌ಐ ಅವರನ್ನು ಅಮಾನತು ಮಾಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಳೆದ ವರ್ಷದ ಫೆಬ್ರುವರಿ 2021ರಲ್ಲಿ ಓವರ್ ಲೋಡ್ ಮರಳು ಸಾಗಿಸುವ ವಾಹನ ಹಿಡಿದು ನಿಲ್ಲಿಸದೇ ನಿರ್ಲಕ್ಷ್ಯ ವಹಿಸಿದ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಿದ್ದಕ್ಕಾಗಿ ಶ್ರೀರಾಮ ಸೇನೆ ಕಾರ್ಯಕರ್ತ ಶರಣಪ್ಪ ರೆಡ್ಡಿ ವಿರುದ್ಧ ಆರ್‌ಟಿಒ ಅವರನ್ನು ಎತ್ತಿಕಟ್ಟಿ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಕಿರಣ ಪಾಟೀಲ ಚನ್ನೂರ ಸ್ಥಳದಲ್ಲಿ ಇಲ್ಲದಿದ್ದರೂ ಆತನ ಮೇಲೂ ಸುಳ್ಳು ಪ್ರಕರಣ ದಾಖಲಿಸಿದ್ದರು ಎಂದು ಕೆಲ ಉದಾಹರಣೆಗಳ ಮೂಲಕ ಆರೋಪಿಸಿದ ಸ್ವಾಮೀಜಿ, ಕಳೆದ ಫೆಬ್ರುವರಿ 8ರಂದು ಜೇವರ್ಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎದುರುಗಡೆ ಕೇಸರಿ ಶಾಲು ಹಾಗೂ ಹಿಜಾಬ್ ಹೋರಾಟ ಸಮಯದಲ್ಲಿ ಪ್ರೊ| ಕರಿಗೂಳೇಶ್ವರ ಎಂಬುವವರು ಕೇಸರಿ ಶಾಲು ಹಾಕಿಕೊಂಡು ಬಂದವರನ್ನು ಗುರಿಯಾಗಿಸಿಕೊಂಡು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾಗ ಅದನ್ನು ಪ್ರಶ್ನಿಸಿದ ವಿಶ್ವ ಹಿಂದೂ ಪರಿಷತ್ತಿನ ಶ್ರೀನಿವಾಸ ಕುಲಕರ್ಣಿ ಹಾಗೂ ಶ್ರೀರಾಮ ಸೇನೆಯ ಈಶ್ವರ ಹಿಪ್ಪರಗಿ ಮೇಲೆ ಮಾಸ್ಕ್ ಹಾಕಿಲ್ಲವೆಂದು ದೂರು ದಾಖಲಿಸಿಕೊಂಡಿದ್ದಾರೆ ಎಂದು ದೂರಿದರು.
ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಪ್ರಕರಣ ದಾಖಲಿಸಿದ ಮತ್ತು ಕರ್ತವ್ಯ ಲೋಪದ ಆರೋಪದ ಮೇರೆಗೆ ಜೇವರಗಿ ಪೊಲೀಸ್ ಠಾಣೆ ಮೇಲಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಜೇವರಗಿ ತಾಲೂಕು ಘಟಕದಿಂದ ನಗರದ ಎಸ್‌ಪಿ ಕಚೇರಿ ಹತ್ತಿರ ಪ್ರತಿಭಟನೆ ನಡೆಸಿ ಎಸ್‌ಪಿ ಅವರಿಗೆ ಮನವಿ ಸಲ್ಲಿಸಲಾಯಿತು. ಶ್ರೀರಾಮ ಸೇನೆ ತಾಲೂಕಾಧ್ಯಕ್ಷ ನಿಂಗಣ್ಣಗೌಡ ಮಾಲಿ ಪಾಟೀಲ ರಾಸಣಗಿ, ಜಿಲ್ಲಾಧ್ಯಕ್ಷ ಮಹೇಶ ಗೊಬ್ಬೂರ ಹಾಗೂ ಇತರರು ಪಾಲ್ಗೊಂಡಿದ್ದರು.