Advertisement

ದೇವಾಲಯದ ಭೂಮಿ ಉಳಿಸುವಂತೆ ಒತ್ತಾಯ

02:34 PM May 20, 2019 | Team Udayavani |

ಕೆ.ಆರ್‌.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿ ಮೆಳ್ಳಹಳ್ಳಿ ಗ್ರಾಮದ ಬೊಮ್ಮ ದೇವರ ದೇವಸ್ಥಾನದ ಭೂಮಿಯನ್ನು ಅಕ್ರಮವಾಗಿ ಬೇರೆಯವರಿಗೆ ಖಾತೆ ಮಾಡಿರುವುದನ್ನು ಖಂಡಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ವಿರುದ್ಧ ಧಿಕ್ಕಾರ ಕೂಗಿದರು.

Advertisement

ಮೆಳ್ಳಹಳ್ಳಿ ಗ್ರಾಮದ ಹೊರವಲಯದ ಹೇಮಾವತಿ ನದಿಯ ದಂಡೆಯಲ್ಲಿರುವ ನೂರಾರು ವರ್ಷಗಳ ಕಾಲದ ಪುರಾತನ ಬೊಮ್ಮದೇವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಸರ್ವೆ ನಂ.30ರ ಪೈಕಿ ಗುಂಡು ತೋಪು ಸೇರಿದಂತೆ ಒಂದು ಎಕರೆ ಭೂಮಿಯಿದ್ದು ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ದೇವಸ್ಥಾನದ ಭೂಮಿಯನ್ನು ತಮ್ಮ ಹೆಸರಿಗೆ ಖಾಸಗಿಯಾಗಿ ಖಾತೆ ಮಾಡಿಸಿಕೊಂಡು ದೇವಸ್ಥಾನಕ್ಕೆ ಹಾಗೂ ನದಿಗೆ ಹೋಗುವ ರಸ್ತೆಯನ್ನು ಬಂದ್‌ ಮಾಡಿದ್ದಾರೆ. ದೇವಾಲಯಕ್ಕೆ ಆಗಮಿಸುವ ಗ್ರಾಮದ ಜನರು ಹಾಗೂ ಭಕ್ತಾದಿಗಳು ಪರಗಳನ್ನು ನಡೆಸಿ ಸಾಮೂಹಿಕ ಅನ್ನಸಂತರ್ಪಣೆ ನಡೆಸಲು, ಜಾತ್ರೆ ಹಬ್ಬಗಳನ್ನು ನಡೆಸಲು ಗ್ರಾಮಕ್ಕೆ ಹಾಗೂ ದೇವಸ್ಥಾನಕ್ಕೆ ಈ ಭೂಮಿಯು ಅವಶ್ಯಕತೆಯಿದೆ. ಈ ಬಗ್ಗೆ ತಹಶೀಲ್ದಾರರು, ಉಪಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಗ್ರಾಮದ ಪರವಾಗಿ ದೂರು ನೀಡಿದ್ದರೂ ಖಾಸಗಿ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿಕೊಡ ಲಾಗಿದೆ. ಈ ಬಗ್ಗೆ ತಹಶೀಲ್ದಾರ್‌ ಕ್ರಮ ಕೈಗೊಂಡು ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸ ಬೇಕಾಗುತ್ತದೆ ಎಂದು ವಕೀಲ ಧನಂಜಯ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ರಾಜಯ್ಯ, ಎಂ.ಬಿ.ನಂಜುಂಡಪ್ಪ, ಮಹದೇವಪ್ಪ, ಶರತ್‌ಕುಮಾರ್‌, ನಾಗರಾಜು, ಶ್ರೀನಾಥ, ಕುಮಾರ, ನಂಜಪ್ಪ, ತಮ್ಮಯ್ಯ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್‌ ಮಾತನಾಡಿ, ಅಕ್ರಮ ಖಾತೆಯನ್ನು ರದ್ದುಪಡಿಸುವಂತೆ ಸ್ಥಳ ಪರಿಶೀಲನೆ ನಡೆಸಿ ಗ್ರಾಮದಲ್ಲಿ ಸಾರ್ವಜನಿಕರಿಂದ ಅಭಿ ಪ್ರಾಯ ಸಂಗ್ರಹಿಸಿ ಉಪಭಾಗಾಧಿ ಕಾರಿಗಳಿಗೆ ವರದಿ ನೀಡುತ್ತೇನೆ. ಗುಂಡುತೋಪು ಹಾಗೂ ದೇವಸ್ಥಾನದ ಜಮೀನನ್ನು ಬೇರೆಯವರ ಹೆಸರಿಗೆ ಖಾತೆ ಮಾಡುವಂತಿಲ್ಲ, ಜೊತೆಗೆ ಈ ಬಗ್ಗೆ ತನಿಖೆ ನಡೆಸಿ ಅಕ್ರಮವೆಸಗಿರುವ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next