Advertisement

ಹಂದಿಜೋಗಿ ಸಮಾಜಕ್ಕೆ ಪುನರ್ವಸತಿಗಾಗಿ ಪ್ರತಿಭಟನೆ

02:37 PM Dec 24, 2017 | |

ಚಾಮರಾಜನಗರ: ನಗರದ ಕರಿನಂಜನಪುರ -ಸೋಮವಾರಪೇಟೆ ರಸ್ತೆ ಬದಿಯಲ್ಲಿ ತಾತ್ಕಾಲಿಕ ಜೋಪಡಿ ನಿರ್ಮಿಸಿಕೊಂಡು ಸುಮಾರು 30 ವರ್ಷಗಳಿಂದ ವಾಸ ಮಾಡುತ್ತಿರುವ ಹಂದಿಜೋಗಿ ಸಮುದಾಯ ದವರಿಗೆ ಪುನರ್ವಸತಿ ಕಲ್ಪಿಸಿ, ಮೂಲ ಸೌಕರ್ಯ ಒದಗಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಜಾ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಸಮುದಾಯದವರು ತಮ್ಮ ಮಕ್ಕಳೊಂದಿಗೆ, ಮನೆ ಬಳಕೆ ಪದಾರ್ಥಗಳನ್ನು ಮುಂದಿಟ್ಟು ಡೀಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Advertisement

ನಗರದ ಪ್ರವಾಸಿಮಂದಿರದ ಆವರಣದಲ್ಲಿ ಕರ್ನಾಟಕ ಪ್ರಜಾ ಸಂರಕ್ಷಣಾ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.
ಪ್ರಸನ್ನಕುಮಾರ್‌ ಹಾಗೂ ಜಿಲ್ಲಾಧ್ಯಕ್ಷ ಬ್ಯಾಡಮೂಡ್ಲುಬಸವಣ್ಣ ಅವರ ನೇತೃತ್ವದಲ್ಲಿ ಸಮಾವೇಶಗೊಂಡು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಅಲ್ಲಿಂದ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಬಿ.ರಾಮು ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. 

ಹಂದಿಜೋಗಿ ಸಮಾಜದ ಸುಮಾರು 30 ರಿಂದ 40 ಕುಟುಂಬಗಳು ಚಾಮರಾಜನಗರದ ಕರಿನಂಜನಪುರ- ಸೋಮವಾರಪೇಟೆ ರಸ್ತೆ ಬದಿಯಲ್ಲಿ ಜೋಪಡಿಯನ್ನು ನಿರ್ಮಿಸಿ ಕೊಂಡು ವಾಸವಾಗಿದ್ದು, ಹಲವಾರು ವರ್ಷಗಳಿಂದ ವಿದ್ಯುತ್‌ ವ್ಯವಸ್ಥೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಹಾಗೂ ಸ್ವಂತ ಸ್ಥಳವಿಲ್ಲದೆ ಮನೆಯಿಲ್ಲದೆ ತುಂಬಾ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಪ್ರಜಾ ಸಂರಕ್ಷಣಾ ಸಮಿತಿ ಸದಸ್ಯರು ಹೇಳಿದರು.

ನಿವೇಶನ ಹಂಚಿಕೆ ಮಾಡಿಲ್ಲ: ನ.9ರಂದು ಹಂದಿಜೋಗಿಗಳು 15 ಜೋಪಡಿಗಳಿಗೆ ಬೆಂಕಿಬಿದ್ದು ಭಸ್ಮವಾಗಿವೆ, ಅವರ ಕುಟುಂಬ ಬೀದಿ ಪಾಲಾಗಿದ್ದಾರೆ. ಸ್ಥಳಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ಪರಿಶೀಲನೆ ನಡೆಸಿ ವಸತಿ ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದು ಇನ್ನೂ ಈಡೇರಿಲ್ಲ. ಅಲ್ಲದೆ ಕರಿನಂಜನಪುರ ಗ್ರಾಮಕ್ಕೆ ಸೇರಿದ ಸರ್ವೆ ನಂ.74ರಲ್ಲಿ ಸಮಾಜಕ್ಕೆ ನಿವೇಶನ ಹಂಚಿಕೆ ಮಾಡುವ ಸಂಬಂಧ ನಗರಸಭೆ ಜಮೀನು ಮಂಜೂರು ಮಾಡಿದೆ. ಆದರೆ, ನಿವೇಶನ ಹಂಚಿಕೆ ಮಾಡುವಲ್ಲಿ ವಿಫ‌ಲವಾಗಿದೆ ಎಂದು ಆರೋಪಿಸಿದರು.

ಹಂದಿಜೋಗಿ ಜನರಿಗೆ ಕರಿನಂಜನಪುರ ಗ್ರಾಮಕ್ಕೆ ಸೇರಿದ ಸರ್ವೆ 74ರಲ್ಲಿ 29 ಗುಂಟೆ ಜಮೀನು ಸರ್ಕಾರದಿಂದ ಮಂಜೂರಾಗಿದೆ. ಅದು ಮುಖ್ಯರಸ್ತೆಯಲ್ಲಿರುವ ಕಾರಣದಿಂದ ಸಮಾಜಕೆ ನಿವೇಶನ ಹಂಚಿಕೆ ಮಾಡಲು ನಗರಸಭೆ ಹಿಂದೇಟು ಕಾಕುತ್ತಿರುವುದು ದಲಿತರ ಮೇಲಿನ ದೌರ್ಜನ್ಯವಾಗಿದೆ ಎಂದು ದೂರಿದರು.

Advertisement

ಕಳೆದ ಒಂದು ತಿಂಗಳ ಹಿಂದೆ ಬಿದ್ದ ಮಳೆ ಯಿಂದಾಗಿ ಹಂದಿಜೋಗಿಗಳ ವಾಸದ ಜೋಪಡಿಗಳಿಗೆ ಮಳೆನೀರು ನುಗ್ಗಿ ಖಾಸಗಿ ಜಮೀನಿನಲ್ಲಿ ತಾತ್ಕಾಲಿಕ ನಿರ್ಮಿಸಿಕೊಂಡಿದ್ದ ಜೋಪಡಿಗಳನ್ನೂ ಜಮೀನು ಮಾಲಿಕರು ತೆರವುಗೊಳಿಸಿದ್ದಾರೆ. ಸಮುದಾಯದವರು ತಮ್ಮ ಸಣ್ಣಮಕ್ಕಳು, ವಯೋವೃದ್ಧರು, ಬಾಣಂತಿ, ಗರ್ಭಿಣಿಯರು ಬಯಲಿನಲ್ಲಿ ಚಳಿಗಾಲದಲ್ಲಿ ಇಡೀ ರಾತ್ರಿ ಜೀವನ ಕಳೆಯಬೇಕಾಗಿದೆ. ಆದರಿಂದ ಹಂದಿಜೋಗಿ ಸಮುದಾಯದವರಿಗೆ ಪುನರ್‌ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಪ್ರತಿಭಟನಾನಿತರರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸತೀಶ್‌, ಶಿವು, ನಾರಾಯಣ್‌, ವೆಂಕಟೇಶ್‌, ಸಿದ್ದಶೆಟ್ಟಿ, ನಾಗರಾಜು, ಸ್ವಾಮಿ, ಕುಮಾರಿ,ಲಕ್ಷ್ಮೀ, ರೂಪಾ, ಪುಷ್ಪಲತಾ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next