ಬೀದರ: ಜಿಲ್ಲೆಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರುನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕನ್ನಡ ಧ್ವಜ ಹಾಗೂ ಫಲಕಗಳನ್ನುಹಿಡಿದು ಘೋಷಣೆ ಕೂಗುತ್ತ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಗರದ ಡಿಸಿ ಕಚೇರಿಪ್ರವೇಶ ದ್ವಾರದ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸೋಮನಾಥ ಮುಧೋಳ ಮಾತನಾಡಿ, ಕನ್ನಡ ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಶ್ರೇಷ್ಠ ಭಾಷೆಯಾಗಿದೆ. ಆದರೆ,ಜಿಲ್ಲೆಯಲ್ಲಿ ಕನ್ನಡಕ್ಕೆ ಅವಮಾನ ಆಗುತ್ತಿದೆ.ಖಾಸಗಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ದೊಡ್ಡ ದೊಡ್ಡ ಶೋರೂಂಗಳು ಜಾಹೀರಾತು ಫಲಕ ಹಾಗೂನಾಮಫಲಕಗಳನ್ನು ಪರಭಾಷೆಯಲ್ಲಿ ಅಳವಡಿಸಿ ಕನ್ನಡದ ಕಗ್ಗೊಲೆ ಮಾಡುತ್ತಿವೆ. ಗಡಿ ಜಿಲ್ಲೆಯಲ್ಲಿ ಸಂಚರಿಸುವ ಬಹಳಷ್ಟು ವಾಹನಗಳ ಫಲಕಗಳನ್ನು ಅನ್ಯ ಭಾಷೆಯಲ್ಲಿ ಬರೆಸಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಅ. 25ರೊಳಗೆ ಕಡ್ಡಾಯವಾಗಿ ದೊಡ್ಡದಾಗಿ ಕನ್ನಡ ನಾಮಫಲಕ ಅಳವಡಿಸುವಂತೆ ಆದೇಶ ಹೊರಡಿಸಬೇಕು. ನಾಮಫಲಕ ಅಳವಡಿಸಲು ನಿರಾಕರಿಸುವವರಿಗೆ ದಂಡ ವಿಧಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅ. 26ರ ನಂತರ ಜಿಲ್ಲೆಯಲ್ಲಿ ಇರುವ ಅನ್ಯ ಭಾಷೆಗಳ ನಾಮಫಲಕಗಳಿಗೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಸಿದರು.
ಹೆಚ್ಚುವರಿ ಡಿಸಿ ರುದ್ರೇಶ ಗಾಳಿ ಮನವಿ ಸ್ವೀಕರಿಸಲು ಆಗಮಿಸಿದಾಗ, ಜಿಲ್ಲಾ ಧಿಕಾರಿಗಳೇ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟುಹಿಡಿದರು. ರುದ್ರೇಶ ಗಾಳಿ ಹಾಗೂ ನಗರಸಭೆಆಯುಕ್ತರು ಮನವೊಲಿಸಿ, ಕನ್ನಡದಲ್ಲಿ ಕಡ್ಡಾಯವಾಗಿ ನಾಮಫಲಕ ಅಳವಡಿಸಲು ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.
ವೇದಿಕೆಯ ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ರೀದೇವಿ ಸ್ವಾಮಿ ಪ್ರಮುಖರಾದ ಸಂತೋಷ ತೋರಣೆಕರ್, ಸುಧಾಕರ ರಾಠೊಡ, ವಿಶ್ವನಾಥ ಗೌಡ,ಗೋಪಾಲ ಕುಲಕರ್ಣಿ, ರಮೇಶ ಬಿರಾದಾರ, ದತ್ತಾತ್ರೇಯ ಅಲಂಕೆರೆ, ಖಾದರ್ ಪಾಷಾ, ಗಣೇಶ ಪಾಟೀಲ, ರಾಜಕುಮಾರ ಎಡವೆ,ವಿವೇಕ ಚಳಕಾಪುರೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.