ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ದೇಶದ ಆರ್ಥಿಕತೆ ಕುಸಿಯುತ್ತಲೇ ಇದೆ. ದುಡಿಯುವ ಜನರ ಬದುಕು ಸಂಕಷ್ಟದಲ್ಲಿದೆ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ರಾಜ್ಯಗಳಿಗೆ ವರ್ಗಾಯಿಸಿದೆ. ಲಾಕ್‌ಡೌನ್ ನಿಂದ ಉಂಟಾದ ದುಷ್ಪರಿಣಾಮಗಳನ್ನು ಎದುರಿಸಲು ಯಾವುದೇ ಸಮರ್ಪಕ ಕ್ರಮಗಳು ಇಲ್ಲವಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿ ಕಾಯಂಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ 200 ದಿನಗಳಿಗೆ ಹೆಚ್ಚಿಸಬೇಕು. ಎಲ್ಲಾ ಕಾರ್ಮಿಕರಿಗೆ ಕನಿಷ್ಠ ಆರು ತಿಂಗಳವರೆಗೆ ಉಚಿತ ಪಡಿತರ ಒದಗಿಸಿ, ಕಾರ್ಮಿಕ ಕಾನೂನುಗಳ ತಿದ್ದುಪಡಿ, ಅಮಾನತು ಕೈಬಿಡಬೇಕು. ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ, ಸುಗ್ರೀವಾಜ್ಞೆಗಳನ್ನು ಹಿಂಪಡೆಯಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಎಪಿಎಂಸಿಯಲ್ಲಿ ಹಮಾಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರಲ್ಲದೆ, ನಂತರ ವಿವಿಧ ಕಾರ್ಮಿಕ ಸಂಘಟನೆಗಳ ಮೂಲಕ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಮಹೇಶ ಪತ್ತಾರ, ಅಶೋಕ ಬಾರ್ಕಿ, ದೇವಾನಂದ ಜಗಾಪೂರ, ಬಿ.ಎಸ್. ಸೊಪ್ಪಿನ, ಎನ್.ಎ. ಖಾಜಿ, ಅಮೃತ ಇಜಾರಿ, ಹುಲಿಗೆಮ್ಮ ಚಲವಾದಿ, ಅನ್ನಪೂರ್ಣಾ ಕುಂಕುರಮಠ, ಬಾಬಾಜಾನ ಮುಧೋಳ, ಪುಂಡಲೀಕ ಬಡಿಗೇರ, ಚಿದಾನಂದ ಸವದತ್ತಿ, ವಿದ್ಯಾ ನಾಶಿಪುಡಿ, ರಾಜಶೇಖರ ಮೆಣಸಿನಕಾಯಿ, ಗುರುಸಿದ್ದಪ್ಪ ಅಂಬಿಗೇರ, ಎಂ.ಎಚ್. ಮುಲ್ಲಾ, ಎ.ಎಸ್. ಪೀರಜಾದೆ ಇನ್ನಿತರರಿದ್ದರು.