ಬೆಂಗಳೂರು: ಲೈಂಗಿಕ ದೌರ್ಜನ್ಯ ನಿಯಂತ್ರಣ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಹಾಗೂ ವಿ.ಎಸ್.ಉಗ್ರಪ್ಪ ಸಮಿತಿ ವರದಿ ಅಂಗೀಕರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಸದಸ್ಯರು ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಕಾಲ್ನಡಿಗೆ ಜಾಥಾ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಇರುವ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಆಂತರಿಕ ದೂರು ನಿವಾರಣಾ ಸಮಿತಿಯನ್ನು ಕಡ್ಡಾಯವಾಗಿ ರಚಿಸಿ ಕಾರ್ಯ ನಿರ್ವಹಣೆಯ ಮೇಲೆ ನಿಗಾ ವಹಿಸಬೇಕು. ನ್ಯಾಯಮೂರ್ತಿ ವರ್ಮಾ ಆಯೋಗದ ಎಲ್ಲ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರವನ್ನು ಗಂಭೀರ ಲೈಂಗಿಕ ಅಪರಾಧ ಎಂದು ಪರಿಗಣಿಸಬೇಕು. ಮಹಿಳೆಯರಿಗೆ ಸಮಾನ ಆಸ್ತಿಯ ಹಕ್ಕನ್ನು ಒದಗಿಸಬೇಕು. ಜೀವನಾಂಶ ಕಾಯಿದೆಯನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷೆ ದೇವಿ, ಐದು ವರ್ಷದಲ್ಲಿ ರಾಜ್ಯ ಸೇರಿದಂತೆ ದೇಶದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.34ರಷ್ಟು ಹೆಚ್ಚಾಗಿವೆ. ಬೆಂಗಳೂರಿನಲ್ಲಿ ದಿನಕ್ಕೆ 9 ಪ್ರಕರಣ ದಾಖಲಾಗುತ್ತಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿಆರ್‌ಬಿ) ವರದಿ ತಿಳಿಸಿದೆ. ಆದ್ದರಿಂದ ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನಿನ ಅಗತ್ಯವಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಾರ್ಷಿಕ ಕೆಲಸದ ದಿನಗಳಿಗೆ ವಿಧಿಸಿರುವ 100 ದಿನಗಳ ಮಿತಿಯನ್ನು ತೆಗೆಯಬೇಕು. ಮಹಿಳೆಯರ ಕೆಲಸದ ನಿಯಮಗಳನ್ನು ಮರು ವಿಮರ್ಶಿಸಬೇಕು ಹಾಗೂ 700 ರೂ. ಕನಿಷ್ಠ ಕೂಲಿ ನೀಡಬೇಕು. ಕೆಲಸದ ಸ್ಥಳದಲ್ಲಿ ವೈದ್ಯಕೀಯ ಸೌಕರ್ಯ, ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಜತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕೇಂದ್ರ ಸರ್ಕಾರ 36 ಕೋಟಿ ರೂ. ಕೂಲಿ ಹಣ ಮತ್ತು 568 ಕೋಟಿ ರೂ. ಸಾಮಗ್ರಿ ವೆಚ್ಚವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಸ್ತ್ರೀಶಕ್ತಿ ಸಂಘ ಮತ್ತು ಸ್ವ ಸಹಾಯ ಗುಂಪುಗಳಿಗೆ ಶೇ.4ರ ಬಡ್ಡಿ ದರದಲ್ಲಿ ಷರತ್ತು ರಹಿತ ಸಾಲಸೌಲಭ್ಯ, ಅಂಗನವಾಡಿ ಕೇಂದ್ರಗಳಲ್ಲಿ ಪಾಲನೆಯೊಟ್ಟಿಗೆ ಎಲ್‌ಕೆಜಿ- ಯುಕೆಜಿ ಶಿಕ್ಷಣವನ್ನು ನೀಡಬೇಕು ಎಂದು ಆಗ್ರಹಿಸಿದರು.
ಕಲಬುರಗಿ, ಬಳ್ಳಾರಿ, ವಿಜಯಪುರ, ಮಂಡ್ಯ, ಕೋಲಾರ, ರಾಯಚೂರು ಸೇರಿದಂತೆ ಹತ್ತುಕ್ಕೂ ಅಧಿಕ ಜಿಲ್ಲೆಯ ಸಂಘಟನೆಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.