ವಿಜಯಪುರ: ರೈತರು ತಮ್ಮ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮೀನಮೇಷ ಎಣಿಸದೇ ಈ ಸಮಸ್ಯೆಗೆ ಪರಿಹಾರ ಕಂಡುಕೊಡಲು ಸರ್ಕಾರ ತಹಶೀಲ್ದಾರ್‌ರಿಗೆ ಅಧಿಕಾರ ನೀಡುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸೋಮವಾರ ನಗರದ ಸಿದ್ದೇಶ್ವರ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಮಹಾತ್ಮ ಗಾಂಧೀಜಿ ವೃತ್ತ, ಬಸವೇಶ್ವರರ ವೃತ್ತ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರೈತರು ಹೊಲಕ್ಕೆ ಹೋಗುವ ದಾರಿ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಕಳೆದ 3-4 ವರ್ಷಗಳಿಂದ ನಿರಂತರ ಮನವಿ ಮಾಡುತ್ತ ಬರಲಾಗಿದೆ. ಆದರೂ ಸರ್ಕಾರ ಈ ಗಂಭೀರ ವಿಷಯದ ಕುರಿತು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.
ದಾರಿ ಸಮಸ್ಯೆ ಇತ್ಯರ್ಥ ಪಡಿಸಲು ಗಂಭೀರವಾಗಿ ಪರಿಗಣಿಸದ ಕಾರಣ ರೈತರು ಹೊಲಕ್ಕೆ ಹೋಗುವ ದಾರಿ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತಹಶೀಲ್ದಾರ್ ಹಾಗೂ ಜಿಲ್ಲಾ ಧಿಕಾರಿಗಳನ್ನು ಈ ಕುರಿತು ಪ್ರಶ್ನಿಸಿದರೆ, ಜಮೀನಿಗೆ ದಾರಿ ಸಮಸ್ಯೆ ಇತ್ಯರ್ಥ ಮಾಡುವ ಅಧಿಕಾರ ನಮಗೆ ಇಲ್ಲ. ನಿಮ್ಮ ಸಮಸ್ಯೆ ಇತ್ಯರ್ಥಕ್ಕೆ ನ್ಯಾಯಾಲಯಕ್ಕೆ ಹೋಗಿ, ದಾರಿ ಕೊಡಲು ಆದೇಶ ತನ್ನಿ ಎಂದು ಹೇಳುತ್ತಾರೆ ಎಂದು ದೂರಿದರು. ಹೊಲಕ್ಕೆ ಹೋಗುವ ದಾರಿ ವಿಷಯವಾಗಿ ರೈತರು ನ್ಯಾಯಾಲಯಕ್ಕೆ ಧಾವೆ ಹೂಡಿದರೆ 15-20 ವರ್ಷ ಪ್ರಕರಣ ಇತ್ಯರ್ಥವಾಗುವುದಿಲ್ಲ. ಇದರಿಂದ ರೈತರು ನ್ಯಾಯಾಲಯಕ್ಕೆ ಅಲೆದಾಡಿ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಹೈರಾಣಾಗುತ್ತಾರೆ. ಹಲವು ಸಂದರ್ಭಗಳಲ್ಲಿ ಹೊಲಕ್ಕೆ ಹೋಗುವ ದಾರಿಗಾಗಿ ಹಳ್ಳಿಗಳಲ್ಲಿ ಹೊಡೆದಾಟ ನಡೆದ್ದು, ಹಲವು ಸಂದರ್ಭದಲ್ಲಿ ಕೊಲೆಯಾದ ಘಟನೆಗಳು ಇವೆ. ಜಮೀನುಗಳು ತುಂಡಾಗಿರುವ ಕಾರಣ ದಾರಿ ಇಲ್ಲದ ಜಮೀನುಗಳು ಬೀಳು ಬಿದ್ದಿವೆ. ಇದರಿಂದ ಉತ್ತಮ ಮಳೆಯಾದರೂ ಬಿತ್ತನೆಯಾಗದೇ ಇಂಥ ಜಮೀನನ್ನು ನಂಬಿದ ರೈತ ಕುಟುಂಬದ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಹೊಲಕ್ಕೆ ಹೋಗುವ ದಾರಿ ಇಲ್ಲದಿರುವುದರಿಂದ ಆಗುತ್ತಿರುವ ಸಮಸ್ಯೆ ವಿವರಿಸಿದರು.
ಆದ್ದರಿಂದ ಶೀಘ್ರದಲ್ಲಿ ಸರ್ಕಾರ ಸಚಿವ ಸಂಪುಟ ಸಭೆಯಲ್ಲಾಗಲಿ ಅಥವಾ ಇದಕ್ಕಾಗಿ ಪ್ರತ್ಯೇಕ ಅಧಿ ವೇಶನದಲ್ಲಿ ಚರ್ಚಿಸಿ ಕಾನೂನು ತಿದ್ದುಪಡಿ ಮಾಡಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಕಾನೂನು ರೂಪಿಸಿಬೇಕು. ದಾರಿ ಮಾಡಿಕೊಡುವ ಅಧಿಕಾರವನ್ನು ಆಯಾ ತಾಲೂಕಿನ ತಹಶೀಲ್ದಾರ್‌ರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸಿದ್ನಾಪುರ ರಂಜಣಗಿ ಮಾತನಾಡಿ, ರಾಜ್ಯದ ರೈತರ ಜಮೀನುಗಳ ಸರ್ವೇ ಕಾರ್ಯವನ್ನು ಬ್ರಿಟಿಷ್ ಆಡಳಿತದಲ್ಲಿದ್ದಾಗ ಮಾಡಿದ್ದು, ಸ್ವಾತಂತ್ರ್ಯ ಸಿಕ್ಕ ನಂತರ 72 ವರ್ಷಗಳವರೆಗೆ ಪುನಃ ಸರ್ವೇ ಮಾಡಿರುವುದಿಲ್ಲ. ಪ್ರತಿ 30 ವರ್ಷಕ್ಕೊಮ್ಮೆ ಜಮೀನುಗಳು ಸರ್ವೇ ಮಾಡಿ, ಹದ್ದುಬಸ್ತು ಗುರುತಿಸಬೇಕೆಂಬ ನಿಯಮ ಪಾಲನೆ ಆಗುತ್ತಿಲ್ಲ. ಹಳ್ಳಿಗಳಲ್ಲಿ ಜಮೀನು ಅತಿಕ್ರಮವಾಗಿ ಹದ್ದಿ ಗುರುತು ಸಿಗದಂತಾಗಿದೆ. ಇದರಿಂದಾಗಿಯೂ ಕೂಡ ಹಳ್ಳಿಗಳಲ್ಲಿ ದಿನ ನಿತ್ಯ ಹೊಡೆದಾಟಗಳು ನಡೆಯುತ್ತಲಿವೆ. ತಕ್ಷಣ ಸರ್ಕಾರ ಎಚ್ಚೆತ್ತುಕೊಂಡು ಮೋಜನಿ ಕಾರ್ಯಕ್ಕೆ ಚಾಲನೆ ನೀಡಬೇಕೆಂದು ಒತ್ತಾಯಿಸಿದರು. ಸರ್ಕಾರದಿಂದ ಕೂಡಲೇ ರೈತರಿಗೆ ಸಮರ್ಪಕವಾಗಿ ಬೆಳೆ ಪರಿಹಾರ ಹಣ ಬಿಡುಗಡೆ ಮಾಡುವುದು, ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಬೆಲೆ ನಿಯಂತ್ರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ಪಾಂಡು ಹ್ಯಾಟಿ, ಗೊಲ್ಲಾಳಪ್ಪ ಚೌಧರಿ, ಕೃಷ್ಣಪ್ಪ ಬಮರಡ್ಡಿ, ಹೊನಕೇರಪ್ಪ ತೆಲಗಿ, ಹನುಮಂತ ತೋಟದ, ರಾಮಣ್ಣ ವಾಲೀಕಾರ, ಚಂದ್ರಾಮ ತೆಗ್ಗಿ, ಬಸವರಾಜ ಹೆಬ್ಟಾಳ, ಲಿಂಗು ಹಡಪದ, ಸಂಗಪ್ಪ ಪಡಸಲಗಿ, ಮಾಚಪ್ಪ ಹೊರ್ತಿ, ಬೂದೆಸಾಬ ಕೋಲಾರ, ನಬೀಸಾಬ ಗಣಿಯಾರ, ಮಲ್ಲಪ್ಪ ಮಾಡ್ಯಾಳ, ನಂದುಗೌಡ ಬಿರಾದಾರ, ಚನಬಸಪ್ಪ ಸಿಂಧೂರ, ಗುರಲಿಂಗಪ್ಪ ಪಡಸಲಗಿ, ಶಿವಪ್ಪ ಸುಂಟ್ಯಾನ, ಅರವಿಂದ ಹಾಲಣ್ಣವರ, ಸಂಗಪ್ಪ ತೇರಾಪುರ, ಸುರೇಶ ಬಿರಾದಾರ, ಬಸವರಾಜ ಬಿರಾದಾರ, ಸಾಗರ, ನಿಂಗು ಹಡಪದ ಪಾಲ್ಗೊಂಡಿದ್ದರು.