ಸುರಪುರ: ನಬಾರ್ಡ್ ಯೋಜನೆಯಡಿ ರೈತರಿಗೆ ಹೈನುಗಾರಿಕೆಗೆ ಸಾಲ ಸೌಲಭ್ಯ ಕಲ್ಪಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಆದೇಶಿಸುವಂತೆ ಒತ್ತಾಯಿಸಿ ಶೊಷಿತ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟಿದರು.
ಒಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಬಡ ರೈತರಿಗೆ ಹೈನುಗಾರಿಕೆ ಉದ್ಯಮ ಮಾಡಲು ನಬಾರ್ಡ್ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಸುವಂತೆ ಸರಕಾರ 2017ರಲ್ಲಿಯೇ ಆದೇಶ ನೀಡಿದೆ. ಆದರೆ ಕಳೆದ ಮೂರು ವರ್ಷಗಳಿಂದ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಾಲ ಸೌಲಭ್ಯ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಹೈನುಗಾರಿಕೆ ಉದ್ಯಮ ಬಲಪಡಿಸಲು ಕೇಂದ್ರ ಸರ್ಕಾರ 2018ರಲ್ಲಿ ನಬಾರ್ಡ್ ಮೂಲಕ 325 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಹಸು, ಎಮ್ಮೆ ಸಾಕಾಣಿಗೆ ಸಾಲ ನೀಡುವ ಮೂಲಕ ರೈತರನ್ನು ಉತ್ತೇಜಿಸಬೇಕು ಎಂದು ಆದೇಶಿಸಿದೆ. ಆದರೆ ಜಿಲ್ಲೆಯಾದ್ಯಂತ ಯಾವುದೇ ಬ್ಯಾಂಕ್‌ನವರು ರೈತರಿಗೆ ಸಾಲ ನೀಡದೆ ಸರಕಾರದ ಆದೇಶವನ್ನು ಉಲ್ಲಂಘಿಸುವ ಮೂಲಕ ರೈತರಿಗೆ ವಂಚನೆ ಮಾಡಿದ್ದಾರೆ ಎಂದು ದೂರಿದರು.
ಪಶು ಭಾಗ್ಯ ಯೋಜನೆ ಅಡಿ ಆನ್‌ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳನ್ನು ಹೊರತು ಪಡಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡ ಅರ್ಹ ಫಲಾನುಭವಿಗಳಿಗೆ ನಬಾರ್ಡ್ ಮೂಲಕ ಹೈನುಗಾರಿಕೆಗೆ 3 ಲಕ್ಷದವರೆಗೆ ಸಾಲ ವಿತರಿಸಲು ಅವಕಾಶವಿದೆ. ಆದರೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಾಲ ನೀಡದೆ ಲಂಚ ಪಡೆದು ಆಂಧ್ರ ಪ್ರದೇಶ ಮೂಲದವರಿಗೆ ಮತ್ತು ಶ್ರೀಮಂತರಿಗೆ ಸಾಲ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬೀದಿ ಬದಿಯ ಸಣ್ಣಪುಟ್ಟ ವ್ಯಾಪಾರಸ್ಥರಿಗೆ, ಹಾಲು ಮಾರಾಟಗಾರರಿಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುವಂತೆ ಕೇಂದ್ರ ಸರಕಾರದ ಆದೇಶವಿದೆ. ಆದರೆ ಬ್ಯಾಂಕ್ ಅಧಿಕಾರಿಗಳು ಸರ್ಕಾರದ ಆದೇಶವನ್ನು ದಿಕ್ಕರಿಸಿ ಏಕಮುಖವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರದ ಯೋಜನೆಗಳು ಬಡವರಿಗೆ ತಲುಪದೆ ಉಳ್ಳವರ ಪಾಲಾಗುತ್ತಿವೆ. ಕಾರಣ ಯೋಜನೆ ಸಾಕಾರಗೊಳ್ಳಲು ಜಿಲ್ಲೆಯಾದ್ಯಂತ ಎಲ್ಲಾ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಬಡವರಿಗೆ ಸಾಲ ಸೌಲಭ್ಯ ಕಲ್ಪಸುವಂತೆ ಕಟ್ಟುನಿಟ್ಟಾಗಿ ಆದೇಶಿಸಬೇಕು. ನಿರ್ಲಕ್ಷ್ಯ ವಹಸಿದಲ್ಲಿ ಸಂಘಟನೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಮೂಲಕ ಸಲ್ಲಿಸಿದರು. ಪ್ರಮುಖರಾದ ಗೋಪಾಲ ಬಾಗಲಕೋಟೆ, ಮಾನಯ್ಯ ದೊರೆ, ಕೃಷ್ಣಾ ದಿವಾಕರ, ಕೇಶಣ್ಣ ದೊರೆ, ಬಸವರಾಜ ಕವಡಿಮಟ್ಟಿ, ದೇವಪ್ಪ ದೇವರಮನಿ ಇದ್ದರು.