ಆಲಮಟ್ಟಿ: ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ಮಾರ್ಚ್ ಅಂತ್ಯದವರೆಗೆ ನೀರು ಹರಿಸಬೇಕು ಹಾಗೂ ಕೆಬಿಜೆಎನ್ನೆಲ್ ವ್ಯವಸ್ಥಾಪಕ ನಿರ್ದೇಶಕ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಮುಖ್ಯ ಅಭಿಯಂತರರ ಮೂಲಕ ಸೋಮವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, 2019-20ನೇ ಸಾಲಿನ ಹಿಂಗಾರು ಹಂಗಾಮಿನ ಕೃ.ಮೇ.ಯೋ. ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಅವರು ಸಭೆಯಲ್ಲಿ ತೀರ್ಮಾನಿಸಿದಂತೆ ಕೃ.ಮೇ.ಯೋ. ಎಲ್ಲ ಕಾಲುವೆಗಳಿಗೆ ಡಿಸೆಂಬರ್ 1ರಿಂದ 2020ರ ಮಾರ್ಚ್ 20ರವರೆಗೆ 14 ದಿನ 8 ದಿನ ಬಂದ್ ಮಾಡಿ ವಾರಾಬಂ ಧಿ ಪದ್ದತಿ ಅನುಸರಿಸಿ ನೀರು ಹರಿಸಲಾಗುವುದು ಎಂದು ತಿಳಿಸಿದ್ದರು.
ಆದರೆ ಆಲಮಟ್ಟಿ ಅಣೆಕಟ್ಟು ವೃತ್ತ ಅಧೀಕ್ಷಕ ಅಭಿಯಂತರು ಹಾಗೂ ಮುಳವಾಡ ಏತ ನೀರಾವರಿ ಯೋಜನೆಯ ವೃತ್ತ ಅಧಿಧೀಕ್ಷಕ ಅಭಿಯಂತರರು ಒಂದೊಂದು ರೀತಿಯಾಗಿ ಒಬ್ಬರು 7 ದಿನ ಚಾಲು 7 ದಿನ ಬಂದ್ ಇನ್ನೊಬ್ಬರು 8 ದಿನ ಚಾಲು 7 ದಿನ ಬಂದ್ ಮಾಡಿ ವಾರಾಬಂದಿ ಪದ್ಧತಿಯಲ್ಲಿ ರೈತರ ಜಮೀನಿಗೆ ನೀರು ಹರಿಸಲಾಗುವದು ಎಂದು ಪ್ರಕಟಣೆ ನೀಡಿದ್ದಾರೆ. ಅಧಿಕಾರಿಗಳೇ ನಿರ್ಧಾರ ಕೈಗೊಳ್ಳುವುದಾದರೆ ನೀರಾವರಿ ಸಲಹಾಸಮಿತಿ ಸಭೆ ನಡೆಸುವುದಾದರೂ ಏಕೆ? ಸಭೆ ಅಧ್ಯಕ್ಷರು ಸಭೆ ತೀರ್ಮಾನವನ್ನು ತಿಳಿಸಿದ ನಂತರವೂ ಅಧಿಕಾರಿಗಳು ಈ ರೀತಿ ಮಾಡುವಂತಿದ್ದರೆ ಸಲಹಾ ಸಮಿತಿ ಅವಶ್ಯವಾದರೂ ಏನು ಎಂದು ಪ್ರಶ್ನಿಸಿದರು.
ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ವ್ಯಾಪ್ತಿಯಲ್ಲಿರುವ ಎಲ್ಲ ಕಾಲುವೆಗಳು ಏತ ನೀರಾವರಿ ಯೋಜನೆಗಳಾಗಿವೆ. ಕಳೆದ ಬಾರಿ ಮುಳವಾಡ ಏತ ನೀರಾವರಿ ಯೋಜನೆ ಹಾಗೂ ಆಲಮಟ್ಟಿ ಬಲದಂಡೆ ಕಾಲುವೆ ನೀರೆತ್ತುವ ಪಂಪ್‌ಗ್ಳು ಕೆಟ್ಟಿದ್ದರ ಪರಿಣಾಮ ರೈತರ ಜಮೀನುಗಳಿಗೆ ನೀರು ಹೋಗಲಿಲ್ಲ. ಜಲಾಶಯದ ಇತಿಹಾಸದಲ್ಲಿಯೇ ನವೆಂಬರ್‌ವರೆಗೆ ಜಲಾಶಯಕ್ಕೆ ನೀರು ಹರಿದು ಬಂದಿರಲಿಲ್ಲವಾದರೂ ಈ ಬಾರಿ ನವೆಂಬರ್ ತಿಂಗಳಿನಲ್ಲಿಯೂ ಹರಿದುಬಂದಿದೆ. ಜಲಾಶಯದಲ್ಲಿ ಇಷ್ಟೊಂದು ನೀರಿದ್ದರೂ ಕೂಡ ವಾರಾಬಂ ದಿ ಪದ್ಧತಿ ಈ ಭಾಗಕ್ಕೆ ಅವಶ್ಯವಿರಲಿಲ್ಲವಾದರೂ ಸಭೆಯಲ್ಲಿ ತೀರ್ಮಾನಿಸಿದ ದಿನಗಳ ಬದಲಾಗಿ 7 ದಿನ ಚಾಲು ಹಾಗೂ 4 ದಿನ ಬಂದ್ ಮಾಡಿ ವಾರಾಬಂ ದಿ ಪದ್ಧತಿ ಅನುಸರಿಸಿ ರೈತರ ಜಮೀನಿಗೆ ನೀರು ಕೊಡಬೇಕು ಎಂದರು.
ಕೃ.ಮೇ.ಯೋಜನೆ ಕಾಲಮಿತಿಯಲ್ಲಿಪೂರ್ಣಗೊಳಿಸಲು 1994ರಲ್ಲಿ ಕೃಷ್ಣಾಭಾಗ್ಯ ಜಲನಿಗಮ ಸ್ಥಾಪಿಸಿ ಆಲಮಟ್ಟಿಯಲ್ಲಿಯೇ ಕಚೇರಿ ಆರಂಭಿಸಲಾಗಿತ್ತು. ನಂತರ ಬಂದ ಅಧಿಕಾರಿಯೊಬ್ಬರು ಆಲಮಟ್ಟಿಯಲ್ಲಿದ್ದ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದರು. ಆದರೆ ಸರ್ಕಾರ ಎರಡೆರಡು ಬಾರಿ ಬೆಂಗಳೂರಿನಲ್ಲಿರುವ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸುವಂತೆ ಆದೇಶ ನೀಡಿದರೂ ಕೂಡ ಅಧಿಕಾರಿಗಳು ಮಾತ್ರ ಬೆಂಗಳೂರಿನಲ್ಲಿಯೇ ಕಚೇರಿಯಿರಿಸಿದ್ದಾರೆ. ಇದರ ವಿರುದ್ಧ ಸಂಘಟನೆವತಿಯಿಂದ ಅನಿರ್ದಿಷ್ಟ ಹೋರಾಟ ನಡೆಸಿ ಆಲಮಟ್ಟಿಗೆ ಕಚೇರಿ ಬರುವವರೆಗೂ ಸತ್ಯಾಗ್ರಹ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕಚೇರಿಯನ್ನು ಬೆಂಗಳೂರಿನಲ್ಲಿಟ್ಟು ಕೃ.ಮೇ. ಯೋಜನೆ ಸಾಕಾರಗೊಳ್ಳುವುದಾದರೂ ಯಾವಾಗ? ಇನ್ನು ಸ್ಕೀಂ ಗಳ ಹೆಸರಿನಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನತೆಯನ್ನು ವಂಚಿಸಲಾಗುತ್ತಿದೆ ಎಂದರು. ಇದಕ್ಕೂ ಮೊದಲು ಮುಖ್ಯ ಅಭಿಯಂತರರ ಕಚೇರಿ ಎದುರು ಧರಣಿನಡೆಸಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಘೋಷಣೆಗಳನ್ನು ಕೂಗಿದರು.
ಮನವಿಯನ್ನು ಮುಖ್ಯ ಅಭಿಯಂತರರ ಪರವಾಗಿ ಉಪಮುಖ್ಯ ಅಭಿಯಂತರರಾದ ಎಂ.ಎನ್. ಪದ್ಮಜಾ ಸ್ವೀಕರಿಸಿದರು. ಧರಣಿಯಲ್ಲಿ ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಹೊನಕೇರಪ್ಪ ತೆಲಗಿ, ಕೃಷ್ಣಪ್ಪ ಬಮ್ಮರಡ್ಡಿ, ದಾವಲಸಾಬ ಪಿಂಜಾರ, ರಾಮಣ್ಣ ವಾಲೀಕಾರ, ಶಾರದಾ ಲಮಾಣಿ, ಚಂದ್ರಾಮ ತೆಗ್ಗಿ, ಮಾಚಪ್ಪ ಹೊರ್ತಿ, ರಾಜೇಸಾಬ ವಾಲೀಕಾರ ಮೊದಲಾದವರಿದ್ದರು