ಹಿರೇಕೆರೂರ: ಹಿರೇಕೆರೂರ ಮತ್ತು ರಟ್ಟೀಹಳ್ಳಿ ತಾಲೂಕುಗಳಲ್ಲಿ ಮುಂಗಾರು ಹಂಗಾಮು ಸಂಪೂರ್ಣ ವಿಫಲವಾಗಿ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಮಾಜಿ ಶಾಸಕ ಯು.ಬಿ.ಬಣಕಾರ ಆಗ್ರಹಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಿರೇಕೆರೂರ ಮತ್ತು ರಟ್ಟೀಹಳ್ಳಿ ಬಿಜೆಪಿ ಘಟಕದಿಂದ ತಹಶೀಲ್ದಾರ್ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ಅವರು, ಮಂಗಾರು ಹಂಗಾಮು ಪ್ರಾರಂಭವಾಗಿ ತಿಂಗಳು ಕಳೆದರೂ ಬಿತ್ತನೆ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಆದರೂ ಕೆಲವು ರೈತರು ಅರೆ ಬರೆ ಮಳೆಯಲ್ಲಿ ಹತ್ತಿ, ಗೋವಿನ ಜೋಳ ಬಿತ್ತನೆ ಮಾಡಿದ್ದಾರೆ. ಸಕಾಲಕ್ಕೆ ಮಳೆ ಬಾರದೇ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಗಳಾಗಲಿ ತಾಲೂಕುಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಸಮಸ್ಯೆ ಅರಿಯುವಂತಹ ಹಾಗೂ ಪರಿಹಾರ ಒದಗಿಸುವ ಪ್ರಯತ್ನವನ್ನು ಇವತ್ತಿನವರೆಗೂ ಮಾಡಿಲ್ಲ ಎಂದು ದೂರಿದರು.
ಈ ಪರಿಸ್ಥಿತಿಯಲ್ಲಿ ರೈತರ ಜೀವನ ನಿರ್ವಹಣೆ ಕಷ್ಟವಾಗಿದ್ದು, ಸರ್ಕಾರ ಎಕರೆವಾರು ರೈತರಿಗೆ 10 ಸಾವಿರ ರೂ.ಗಳ ಪರಿಹಾರ ನೀಡಬೇಕು. ರಟ್ಟೀಹಳ್ಳಿ ತಾಲೂಕು ಘೋಷಣೆಯಾಗಿ ಕೇವಲ ತಹಶೀಲ್ದಾರ್ ಕಾರ್ಯಾಲಯ ಮಾತ್ರ ಪ್ರಾರಂಭವಾಗಿದೆ. ಅದು ಸಹ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ರಟ್ಟೀಹಳ್ಳಿ ತಾಲೂಕಿನಲ್ಲಿ ಎಲ್ಲ ಇಲಾಖೆಗಳನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ ಅನಕೂಲ ಕಲ್ಪಿಸಬೇಕು. ಅವಳಿ ತಾಲೂಕಿನ 83 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಆ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಬೇಕು. ಬಾಡಿಗೆ ರೂಪದಲ್ಲಿ ಪಡೆದ ಕೊಳವೆ ಬಾವಿಗಳಿಗೆ ಪ್ರತಿ ತಿಂಗಳು ಹಣ ಪಾವತಿ ಮಾಡಬೇಕು. ಬಾಡಿಗೆ ದರವನ್ನು 15 ಸಾವಿರ ರೂ,ಗೆ ಹೆಚ್ಚಿಸಬೇಕು. ಬರಗಾಲದ ಪರಿಸ್ಥಿತಿಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸದ ಅವಶ್ಯಕತೆ ಹೆಚ್ಚಿದ್ದು, ಕೂಡಲೇ ಎಲ್ಲ ಗ್ರಾಮ ಪಂಚಾಯಿತಿಗಳು ನರೇಗಾ ಯೋಜನೆಯಲ್ಲಿ ಕೆಲಸ ನೀಡಬೇಕು. ವಿವಿಧ ಅಭಿವೃದ್ಧಿ ನಿಗಮಗಳಿಂದ ಆಯ್ಕೆಯಾದ ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯಿಸಲು ಕ್ರಮ ಕೈಗೊಳ್ಳಬೇಕು. ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಉಪ ಕಾಲುವೆ ನಿರ್ಮಿಸಬೇಕು. ಭೂಮಿ ಕಳೆದುಕೊಂಡ ರೈತರ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಸ್.ಆರ್.ಅಂಗಡಿ, ತಾಪಂ ಅಧ್ಯಕ್ಷ ಹೇಮಪ್ಪ ಮುದರಡ್ಡೇರ, ಜಿಪಂ ಸದಸ್ಯರಾದ ಶಿವರಾಜ ಹರಿಜನ, ಸುಮಿತ್ರಾ ಪಾಟೀಲ, ಕೆಎಂಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ ಮುಖಂಡರಾದ ಮಹೇಶ ಗುಬ್ಬಿ, ಆನಂದಪ್ಪ ಹಾದಿಮನಿ, ಷಣ್ಮುಖಯ್ಯ ಮಳಿಮಠ, ನಿಂಗಪ್ಪ ಚಳಗೇರಿ, ಮಲ್ಲಿಕಾರ್ಜುನ ಬುರಡೀಕಟ್ಟಿ, ಎಸ್.ಬಿ.ಪಾಟೀಲ, ಬಸವರಾಜ ಬೇವಿನಹಳ್ಳಿ, ಶಿವಣ್ಣ ಗಡಿಯಣ್ಣನವರ, ವೀರಬಸಪ್ಪ ಮತ್ತೂರ, ಸುರೇಶ ಲಮಾಣಿ, ರಮೇಶ ಮಾಳಮ್ಮನವರ, ಸುಜಾತಾ ಕೊಟಗಿಮನಿ, ಲತಾ ಬಣಕಾರ, ನಿರ್ಮಲಾ ಗುಬ್ಬಿ, ಬಿ.ಟಿ.ಚಿಂದಿ, ಗಣೇಶಗೌಡ ಪಾಟೀಲ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.