Advertisement

ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ

05:30 PM Dec 23, 2021 | Team Udayavani |

ರಬಕವಿ ಬನಹಟ್ಟಿ: ರಬಕವಿ-ಬನಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹತ್ತು ದಿನಗಳಿಂದ ಅತಿಥಿ ಉಪನ್ಯಾಸಕರು ಬೋಧನೆ ಮಾಡುವ ತರಗತಿಗಳು ನಡೆಯುತ್ತಿಲ್ಲ. ಇದರಿಂದ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆಯಾಗಿದೆ. ಆದ್ದರಿಂದ ಉನ್ನತ ಶಿಕ್ಷಣ ಸಚಿವರು ಈ ಕುರಿತು ಕ್ರಮ ತೆಗೆದುಕೊಂಡು ಆದಷ್ಟು ಬೇಗನೆ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸ್ಪಂದಿಸಿ ತರಗತಿಗಳನ್ನು ಬೇಗನೆ ಪುನಾರಾಂಭಿಸಬೇಕು ಎಂದು ಎಬಿವಿಪಿ ನಗರ ಘಟಕದ ಕಾರ್ಯದರ್ಶಿ ಶಿವು ಬಡಿಗೇರ ತಿಳಿಸಿದರು.

Advertisement

ಅವರು ಗುರುವಾರ ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದ ಮುಂಭಾಗದಲ್ಲಿ ಎಬಿವಿಪಿ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಮಾತನಾಡಿದರು.

ಈಗಾಗಲೇ ಕೊರೊನಾದಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಬಹಳಷ್ಟು ತೊಂದರೆಯನ್ನು ಅನುಭವಿಸಿದ್ದಾರೆ. ಇನ್ನೂ ಮುಂದಾದರೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡುವತ್ತ ಸರ್ಕಾರ ಗಮನ ನೀಡಬೇಕಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಬಡಿಗೇರ ತಿಳಿಸಿದರು.

ಇದೇ ವೇಳೆ ಸ್ನೇಹಾ ಪವಾರ ಮಾತನಾಡಿ, ಸರ್ಕಾರ ಅತಿಥಿ ಉಪನ್ಯಾಸಕರನ್ನು ತಡವಾಗಿ ನೇಮಿಸಿ ಕೊಂಡಿದೆ. ಕಾಲೇಜು ಆರಂಭವಾಗಿ ಕೇವಲ ಹದಿನೈದು ದಿನಗಳಾಗಿದ್ದು, ಈಗ ಹತ್ತು ದಿನಗಳಿಂದ ಅತಿಥಿ ಉಪನ್ಯಾಸಕರು ಕಾಲೇಜಿಗೆ ಬಂದು ಬೋಧನೆ ಮಾಡುತ್ತಿಲ್ಲ. ರಬಕವಿ ಬನಹಟ್ಟಿ ಸರ್ಕಾರಿ ಕಾಲೇಜಿನಲ್ಲಿ ಇದುವರೆಗೆ ಯಾವುದೆ ರೀತಿಯಾದ ಆಂತರಿಕ ಪರೀಕ್ಷೆಗಳು ನಡೆದಿಲ್ಲ. ಸರಿಯಾದ ರೀತಿಯಲ್ಲಿ ಪಠ್ಯ ಕ್ರಮಗಳು ನಡೆದಿಲ್ಲ. ಜನೆವರಿ ಕೊನೆಯ ಇಲ್ಲವೆ ಫೆಬ್ರುವರಿ ಪ್ರಥಮ ವಾರದಲ್ಲಿ ಸೆಮ್ ಪರೀಕ್ಷೆಗಳು ಆರಂಭವಾಗುತ್ತವೆ. ಇದರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಹೇಮಂತ ಮಳಲಿ, ತಾಲ್ಲೂಕು ಸಂಚಾಲಕ ಧರೆಪ್ಪ ಕುಂಬಾರ, ಅಭಿ ಸಾಲ್ಗುಡೆ, ಸಂಗಮೇಶ ಅಂಬಿಗೇರ, ಸ್ವಾತಿ ಬರಗಲ, ಗೀತಾ ಉಪ್ಪಾರ, ಸುಧಾ ಮೇತ್ರಿ, ಕೀರ್ತಿ ಬಿಳ್ಳೂರ, ದೀಣಾ ಕೊಳಕಿ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next