ದೇವನಹಳ್ಳಿ: ತಾಲೂಕಿನ ಬೀರಸಂದ್ರಗ್ರಾಮದ ಎಸ್‌ಸಿ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಿ, ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಗ್ರಾಮದ ನಿವಾಸಿಗಳು ಪ್ರತಿಭಟನೆ ನಡೆಸಿದರು. ಕಳೆದ ಎರಡು ವರ್ಷಗಳಿಂದ ಕಾಲೋನಿಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಎರಡು ಕೊಳವೆ ಬಾವಿಇದ್ದರೂ, ವಾಟರ್ ಮ್ಯಾನ್ ಸರಿಯಾದ ರೀತಿ ನಿರ್ವಹಣೆ ಮಾಡುತ್ತಿಲ್ಲ ಎಂದುಗ್ರಾಮಸ್ಥರು ಆರೋಪಿಸಿದರು.
ಗ್ರಾಮಸ್ಥ ನಾರಾಯಣಸ್ವಾಮಿ ಮಾತನಾಡಿ, ಬೀರಸಂದ್ರ ಗ್ರಾಮದಕಾಲೋನಿ ಮತ್ತು ಇನ್ನಿತರೆ ಕಡೆ 35 ಮನೆಗಳು ಇದ್ದೂ, ಎರಡು ವರ್ಷ ದಿಂದ ನೀರಿನ ಸಮಸ್ಯೆ ಕಾಡುತ್ತಿದೆ. ವಾಟರ್ ಮ್ಯಾನ್‌ಗೆ ಸರಿಯಾದ ರೀತಿಕೊಳವೆ ಬಾವಿ ನಿರ್ವಹಣೆ ಮಾಡಿ,ನೀರು ಬಿಡುವಂತೆ ಪಿಡಿಒ ಸೂಚಿಸಿದರೂ, ಪಿಡಿಒ ಸೂಚನೆಗೆ ಬೆಲೆ ಇಲ್ಲದಂತಾಗಿದೆ ಎಂದರು.
ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಇಲ್ಲದಂತಾಗಿದೆ. ಚರಂಡಿಗಳಲ್ಲಿ ಕಸ ತುಂಬಿಕೊಂಡಿದ್ದರೂ, ಗ್ರಾಪಂ ಸ್ವತ್ಛ ಪಡಿಸುವ ಕಾರ್ಯ ಮಾಡುತ್ತಿಲ್ಲ. ಇದರಿಂದ ದಿನ ನಿತ್ಯ ದುರ್ವಾಸನೆ ಮತ್ತು ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಗ್ರಾಪಂ ಸದಸ್ಯರಿಗೆ ಸಮಸ್ಯೆ ಗಳ ಬಗ್ಗೆ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಸ್ಥೆ ಲಕ್ಷ್ಮೀ ಮಾತನಾಡಿ, ಒಂದು ಬಿಂದಿಗೆ ನೀರಿಗಾಗಿ ತೋಟಮತ್ತು ಇನ್ನಿತರೆ ಕಡೆಗಳಲ್ಲಿ ಬೇಡಾಡಿ ತರುವ ದುಸ್ಥಿತಿ ಇದೆ. ಗ್ರಾಪಂಗೆ ಎರಡೆರಡು ಬಾರಿ, ನೀರಿನ ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಚರಂಡಿಯ ಪೈಪ್ ಗಳು ಬ್ಲಾಕ್ ಆಗಿದೆ. ನಮ್ಮ ಸಮಸ್ಯೆಗಳನ್ನು ಕೇಳುವವರಿಲ್ಲ. ವಾರಕ್ಕೆ ಒಂದು ಬಾರಿ 450 ರೂ.ಕೊಟ್ಟು ಟ್ಯಾಂಕರ್ ಮೂಲಕ ನೀರುಕೊಳ್ಳುತ್ತಿದ್ದೇವೆ. ಕಾಂಕ್ರೀಟ್ ರಸ್ತೆ ಹಾಳಾಗಿದ್ದು, ನೀರಿನ ಪೈಪ್ ಲೈನ್‌ಕಾಮಗಾರಿ ಮುಗಿಸಬೇಕು. ಮಕ್ಕಳು ಈ ರಸ್ತೆಯಲ್ಲಿ ಬಿದ್ದು ಮೊಣಕಾಲು, ಕೈ ಗಳಿಗೆ ಗಾಯಗಳಾಗುತ್ತಿವೆ ಎಂದು ತಮ್ಮ ಕಷ್ಟ ತೋಡಿಕೊಂಡರು. ಗ್ರಾಮಸ್ಥ ಮದ್ದೂರಪ್ಪ ಮಾತನಾಡಿ, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಕೊಂಡು ಗ್ರಾಮದ ಸಮಸ್ಯೆಗಳನ್ನು ಶೀಘ್ರ ಬಗೆ ಹರಿಸಬೇಕು ಎಂದರು.ಪ್ರತಿಭಟನೆಯಲ್ಲಿ ಗ್ರಾಮದ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.