ಸಾಗರ: ನಗರದ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಸ್ನಾತಕೋತ್ತರ, ತೃತೀಯ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸುವಂತೆ ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿ ಕಾರಿಗಳ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕಾಲೇಜಿನಿಂದ ಹೊರಟ ಸಾವಿರಾರು ವಿದ್ಯಾರ್ಥಿನಿಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಎಸಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿನಿಯರ ಅಹವಾಲು ಆಲಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸ್ನಾತಕೋತ್ತರ, ತೃತೀಯ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿನಿಯರ ಬೇಡಿಕೆ ನ್ಯಾಯೋಚಿತವಾಗಿದೆ. ಸರ್ಕಾರ ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್ ಒದಗಿಸುವ ಮೂಲಕ ಅವರು ಆಧುನಿಕ ವಿಧಾನದಲ್ಲಿ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಬೇಕು. ವಿದ್ಯಾರ್ಥಿನಿಯರು ತಮ್ಮ ಹಕ್ಕುಗಳಿಗಾಗಿ ರಸ್ತೆಗಳಿದು ಹೋರಾಟ ಮಾಡುವ ಸ್ಥಿತಿ ಸರ್ಕಾರ ನಿರ್ಮಾಣ ಮಾಡಬಾರದು ಎಂದು ಹೇಳಿದರು.
ವಿದ್ಯಾರ್ಥಿನಿಯರ ಅಹವಾಲು ಕೇಳಿದ್ದೇನೆ. ಅವರ ಬೇಡಿಕೆ ನ್ಯಾಯೋಚಿತವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ತಕ್ಷಣ ಲ್ಯಾಪ್‌ಟಾಪ್ ವಿತರಣೆ ಮಾಡುವಂತೆ ಮನವಿ ಸಲ್ಲಿಸಲಾಗುತ್ತದೆ. ಸಂದರ್ಭ ಬಂದಲ್ಲಿ ಮುಖ್ಯಮಂತ್ರಿಗಳನ್ನು ಮತ್ತು ಉನ್ನತ ಶಿಕ್ಷಣ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ವಿದ್ಯಾರ್ಥಿನಿಯರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ ಸರ್ಕಾರ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದೆ. ಸ್ನಾತಕೋತ್ತರ, ತೃತೀಯ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಅವಕಾಶವಿಲ್ಲ ಎಂದು ಕಾಲೇಜಿನ ಮುಖ್ಯಸ್ಥರು ಹೇಳುತ್ತಿದ್ದಾರೆ. ಕಾಲೇಜಿನ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿನಿಯರು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೆ ಲ್ಯಾಪ್ ಟಾಪ್ ನೀಡದಿರುವುದರಿಂದ ಸಮರ್ಪಕವಾಗಿ ಶಿಕ್ಷಣ ಪಡೆಯಲು ಅನಾನುಕೂಲವಾಗುತ್ತಿದೆ ಎಂದು ಪ್ರತಿಭಟನಕಾರರು ದೂರಿದರು.
ಈಗಾಗಲೇ ಕಾಲೇಜಿಗೆ 1 ಸಾವಿರಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗ್ಳು ಬಂದಿದೆ. ಅದನ್ನು ವಿದ್ಯಾರ್ಥಿನಿಯರಿಗೆ ನೀಡಿದರೆ ಅವರಿಗೆ ಹೆಚ್ಚು ಅನುಕೂಲವಾಗುತ್ತದೆ. ಹಿಂದಿನಿಂದಲೂ ವಿದ್ಯಾರ್ಥಿನಿಯರು ಪ್ರಾಚಾರ್ಯರಿಗೆ ಲ್ಯಾಪ್ ಟಾಪ್ ನೀಡುವಂತೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಸರ್ಕಾರದ ನಿರ್ದೇಶನವಿಲ್ಲದೆ ಕಾಲೇಜು ಮುಖ್ಯಸ್ಥರು ಏನೂ ಮಾಡದ ಸ್ಥಿತಿಯಲ್ಲಿದ್ದಾರೆ. ತಕ್ಷಣ ಸರ್ಕಾರ ದ್ವಿತೀಯ, ತೃತೀಯ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರು ಲ್ಯಾಪ್ ಟಾಪ್ ನೀಡಬೇಕು. ಇಲ್ಲವಾದಲ್ಲಿ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.