ಬಳ್ಳಾರಿ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಕಡಿತಗೊಳಿಸಿದರೂ ತೆರಿಗೆ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ವೃತ್ತದಲ್ಲಿ ಜಮಾಯಿಸಿದ್ದ ಪಕ್ಷದ ನೂರಾರು ಕಾರ್ಯಕರ್ತರು, ಮೈತ್ರಿ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು. ಪುಟ್ಟರಂಗಶೆಟ್ಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಬೆಲೆಯನ್ನು ದಿನದಿಂದ- ದಿನಕ್ಕೆ ಇಳಿಸಿಕೊಂಡು ಅತ್ಯಂತ ಕಡಿಮೆ ಬೆಲೆಗೆ ಸಾರ್ವಜನಿಕರಿಗೆ ಒದಗಿಸುತ್ತಿದೆ. ಆದರೆ, ರಾಜ್ಯ ಸರ್ಕಾರ ಡೀಸೆಲ್ ಮೇಲೆ 1.83 ರೂ. ಪೈಸೆ, ಪೆಟ್ರೋಲ್ ಮೇಲೆ 1.89 ರೂ. ಪೈಸೆ ಸೆಸ್ ಹೆಚ್ಚಿಸಿದೆ.
ಇದರಿಂದ ಜನರಿಗೆ ಹೊರೆಯಾಗಿಸಿದ್ದು, ಕೂಡಲೇ ಡೀಸೆಲ್, ಪೆಟ್ರೋಲ್ ಮೇಲೆ ಹೆಚ್ಚಿಸಿರುವ ತೆರಿಗೆ ಕಡಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಇನ್ನು ಸಚಿವ ಪುಟ್ಟರಂಗಶೆಟ್ಟಿ ಆಪ್ತ ಸಹಾಯಕ ಮೋಹನ್ ಎನ್ನುವವರು ಮೂಟೆಯಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಹಣವನ್ನು ಕೊಂಡೊಯ್ಯುತ್ತಿದ್ದಾರೆ.
ಮೂಟೆಯ ಮೇಲೆ ಪುಟ್ಟರಂಗಶೆಟ್ಟಿ ಎಂದು ಹೆಸರನ್ನು ಬರೆಯಲಾಗಿದ್ದು, ಇದರಿಂದ ವಿಧಾನಸಭೆಯಲ್ಲಿ ಎಷ್ಟರ ಮಟ್ಟಿಗೆ ನೇರವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇಷ್ಟು ಮೊತ್ತದ ಹಣವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪುಟಗೋಸಿ ಹಣ ಎಂದು ಕೀಳಾಗಿ ಮಾತನಾಡಿದ್ದಾರೆ. ದಿನೇಶ್ ಗುಂಡೂರಾವ್ ಅವರಿಗೆ ಈ ಹಣ ಪುಟಗೋಸಿ ಆಗಿರಬಹುದು. ಪುಟ್ಟರಂಗಶೆಟ್ಟಿಗೆ ಪುಟಗೋಸಿ ಆಗದಿರಬಹುದು. ಹಾಗಾಗಿ ಹಣವನ್ನು ಪಡೆದಿರಬಹುದು. ಲೋನ್ ನೀಡಲು ಸಹ ಹಣವನ್ನು ಪಡೆಯುತ್ತಿದ್ದಾರೆ ಎಂದು ಅನುಮಾನ ಮೂಡುತ್ತಿದೆ. ಆದ್ದರಿಂದ ಪುಟ್ಟರಂಗಶೆಟ್ಟಿ ಅವರು ಸಚಿವ ರಾಜೀನಾಮೆ
ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಪಾಲಿಕೆ ಸದಸ್ಯರಾದ ಮಲ್ಲನಗೌಡ, ಶ್ರೀನಿವಾಸ್ ಮೋತ್ಕರ್, ಮುಖಂಡರಾದ ಜಿ.ವಿರೂಪಾಕ್ಷಗೌಡ, ಎಚ್. ಹನುಮಂತಪ್ಪ, ಶ್ರೀನಿವಾಸ ಪಾಟೀಲ್, ಅಶೋಕ್ ಕುಮಾರ್, ಅನಿಲ್‌ನಾಯ್ಡು, ಬಸವರಾಜ್ ಬಿಸಲಹಳ್ಳಿ, ಸುಗುಣ, ಪದ್ಮಾವತಿ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.