ಚಿಕ್ಕೋಡಿ: ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆ ಮಾಡಲು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯವರು ನಡೆಸುತ್ತಿರುವ ಧರಣಿ ಸತ್ಯಾಗ್ರಹವು ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ, ಈ ನಿಮಿತ್ಯವಾಗಿ ಧರಣಿ ನಿರತ ಸ್ಥಳಕ್ಕೆ ಚಿಕ್ಕೋಡಿ -ಸದಲಗಾ ಶಾಸಕರಾದ ಗಣೇಶ ಹುಕ್ಕೇರಿಯವರು ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಇದೇ ಸಮಯದಲ್ಲಿ ಹೋರಾಟ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವ ಕುರಿತು ಈಗಾಗಲೇ ಸಾಕಷ್ಟು ಬಾರಿ ಸರಕಾರವನ್ನು ಒತ್ತಾಯಿಸಿದ್ದೇವೆ, ನಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಾದಯಾತ್ರೆ ಮುಖಾಂತರ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಹೋರಾಟಕ್ಕೆ ಬೆಂಬಲ ನೀಡುವಂತೆ ಪ್ರತಿಯೊಬ್ಬ ನಾಗರಿಕನಿಗೂ ಕರೆ ನೀಡಲು ಸಿದ್ಧ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಚಿಕ್ಕೋಡಿನ್ನು ಜಿಲ್ಲೆ ಮಾಡುವ ಸದುದ್ದೇಶದಿಂದ ಕಳೆದ ನಾಲ್ಕು ದಶಕಗಳಿಂದ ಮಾಜಿ ಸಚಿವರಾದ ಪ್ರಕಾಶ ಹುಕ್ಕೇರಿಯವರು ಚಿಕ್ಕೋಡಿಯನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ, ಇನ್ನೇನಿದ್ದರೂ ಚಿಕ್ಕೋಡಿ ಜಿಲ್ಲೆಯನ್ನು ಘೋಷಣೆ ಮಾಡುವುದೊಂದೆ ಬಾಕಿ ಇದೆ ಹಾಗೂ ಈ ಮುಂಚೆಯೂ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲೆ ಮಾಡಬೇಕೆಂದು ಮನವಿ ಕೊಡಲು ಜಿಲ್ಲೆಯ ಎಲ್ಲ ಸ್ವಾಮಿಜಿಗಳನ್ನು ಮತ್ತು ಸ್ಥಳೀಯ ಮುಖಂಡರನ್ನು ಬೆಂಗಳೂರಿಗೆ ಕರೆದೊಯ್ದಿದ್ದರು ಎಂದು ತಿಳಿಸಿದರು.
ಚಿಕ್ಕೋಡಿಯನ್ನು ಜಿಲ್ಲೆ ಮಾಡಲು ನಾನು ಹಾಗೂ ನಮ್ಮ ತಂದೆಯವರು ನಮ್ಮ ದೇಹದಲ್ಲಿ ಉಸಿರು ಇರೋವರೆಗೂ ಹೋರಾಡಲು ಸದಾ ಸಿದ್ಧರಿದ್ದೇವೆ, ಈಗಾಗಲೇ ಮುಖ್ಯಮಂತ್ರಿಯವರ ಜೊತೆ ಚರ್ಚಿಸಲಾಗಿದೆ, ಚಿಕ್ಕೋಡಿ ಜಿಲ್ಲೆಗಾಗಿ ಒಂದು ಸಾರಿ ಸಭೆ ಮಾಡಲು ಸಮ್ಮತಿ ಸೂಚಿಸಿದ್ದಾರೆ, ಅತೀ ಶೀಘ್ರದಲ್ಲಿ ಬೆಳಗಾವಿಯಲ್ಲಿ ಸಭೆ ಮಾಡಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದರು.
ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಸದಸ್ಯರು, ಚಿಕ್ಕೋಡಿ ಪುರಸಭೆ ಸದಸ್ಯರು, ಜಿಲ್ಲಾ ಪಂಚಾಯತ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.