ಹಾವೇರಿ: ಜಿಲ್ಲೆಯ ರಾಣಿಬೆನ್ನೂರ ತಾಲೂಕು ಚಿಕ್ಕಕುರುವತ್ತಿ ಗ್ರಾಮದಲ್ಲಿ ಮಂಜೂರಾಗಿರುವ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕೂಡಲೇ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಡಾ| ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕೆಲಹೊತ್ತು ಪ್ರತಿಭಟನೆ ನಡೆಸಿದ ಸಾರ್ವಜನಿಕರು ಚಿಕ್ಕಕುರುವತ್ತಿ ಗ್ರಾಮಕ್ಕೆ 2019-20ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಇದೇ ಅವ ಧಿಯಲ್ಲಿ ಅನುಮೋದನೆಗೊಂಡ ಹರನಗಿರಿ ಗ್ರಾಮದಲ್ಲಿ ಆ. 24ರಂದು ಶಾಸಕರು ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಆದರೆ ಚಿಕ್ಕಕುರುವತ್ತಿ ಗ್ರಾಮದ ಭವನ ನಿರ್ಮಾಣಕ್ಕೆ ಮೀನಮೇಷಎಣಿಸುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಗ್ರಾಮಕ್ಕೆ ಮಂಜೂರಾಗಿರುವ ಭವನವನ್ನು ನಿರ್ಮಿಸಲು ಶಾಸಕರು ಕೂಡಲೇ ಮುಂದಾಗಬೇಕು. ಇಲ್ಲವಾದರೆ ಇದು ಸಂವಿಧಾನ ಶಿಲ್ಪಿಗೆ ಶಾಸಕರು ಮಾಡುವ ಅವಮಾನವಾಗಲಿದೆ. ಈಗಾಗಲೇ ತಹಶೀಲ್ದಾರ್‌ಗೂ ಈ ಕುರಿತು ಮನವಿ ಸಲ್ಲಿಸಲಾಗಿದೆ. ಆದರೆ ಅವರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಣಿಬೆನ್ನೂರ ಶಾಸಕರು ಹಾಗೂ ತಹಶೀಲ್ದಾರರು ದಲಿತರಿಗೆ ಸ್ಪಂದಿಸುತ್ತಿಲ್ಲ. ಅಲ್ಲದೇ ತಾಲೂಕಿನಲ್ಲಿ ಅಕ್ರಮವಾಗಿ ಮರಳು ದಂಧೆ, ಮಟ್ಕಾ, ಇಸ್ಪೀಟ್ ದಂಧೆ ಎಗ್ಗಿಲ್ಲದೇ ಸಾಗಿದೆ.ಕೂಡಲೇ ಅಕ್ರಮ ದಂಧೆಗಳಿಗೂ ಕಡಿವಾಣ ಹಾಕಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿಲ್ಲಾಧಿಕಾರಿಗಳು ಕೂಡಲೇ ಚಿಕ್ಕಕುರುವತ್ತಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಚಾಲನೆ ಕೊಡಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಮತ್ತೆ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಮುಖಂಡರಾದ ಹನುಮಂತಪ್ಪ ಕಬ್ಟಾರ, ಹನುಮಂತಪ್ಪ ಪಾತ್ರೇರ, ರಮೇಶ ಮಲ್ಲಾಡದ, ಫಕ್ಕಿರೇಶ ಆನ್ವೇರಿ, ಸಿದ್ದಪ್ಪ ಆನ್ವೇರಿ, ಮಾಲತೇಶ ಬಾರ್ಕಿ, ಬಸಪ್ಪ ಹೊನ್ನತ್ತಿ, ವಿರುಪಾಕ್ಷಪ್ಪ ಹೊನ್ನತ್ತೆಪ್ಪನವರ, ಶಿವಪ್ಪ ಪಾತ್ರೇರ, ಬಸವರಾಜ ಬಸಾಪುರ, ಕುಮಾರ ಮಡಿವಾಳರ, ಬಸಪ್ಪ ರಾಮಣ್ಣನವರ, ಬಸವರಾಜ ಹಂಡ್ರೆ, ದುರ್ಗಪ್ಪ ಹಿರಿಯಣ್ಣನವರ, ರಮೇಶ ಹಂಚಿನಮನಿ ಇತರರಿದ್ದರು.