ಮಳವಳ್ಳಿ: ಬಗರ್ ಹುಕುಂ ಸಾಗುವಳಿ ದಾರರಿಗೆ ಶೀಘ್ರ ಹಕ್ಕು ಪತ್ರ, ಆನೆ ದಾಳಿ, ಬರ, ಮಳೆ ಹಾನಿ ರೈತರ ಪರಿಹಾರಕ್ಕೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಮುಂದೆ ಪ್ರಾಂತ ರೈತ ಸಂಘದ ಕಾರ್ಯಕರ್ತರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣನಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿದ ಪ್ರತಿಭಟನಾ ಕಾರರು ರೈತರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಭರತ್‌ರಾಜ್ ಮಾತನಾಡಿ, ಬಗರ್‌ಹುಕುಂ ಸಾಗುವಳಿದಾರರು ಮಂಜುರಾತಿಗಾಗಿ ಸಲ್ಲಿಸಿರುವ ಫಾರಂ-57, 53ಮತ್ತು 50ರ ಅರ್ಜಿಗಳನ್ನು ಶೀಘ್ರವೇ ಪರಿಶೀಲಿಸಿ ಹಕ್ಕು ಪತ್ರ ನೀಡಲು ಕೂಡಲೇ ಭೂ ಮಂಜೂರಾತಿ ಸಮಿತಿ ರಚಿಸಬೇಕು, ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಫಾರಂ ನಂ.57ರ ಅರ್ಜಿ ಪಡೆಯಲು ಸ್ಥಗಿತಗೊಳಿಸಿದ್ದರಿಂದ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ರೈತರಿಗೆ ಪರಿಹಾರ ನೀಡಿ: ಗೋಮಾಳ ಜಮೀನಿನಲ್ಲಿ 60-70 ವರ್ಷಗಳಿಂದ ಅನುಭವದಲ್ಲಿರುವ ರೈತರಿಗೆ ಅರಣ್ಯ ಇಲಾಖೆ ಕಿರುಕುಳ ನೀಡುತ್ತಿರುವುದನ್ನು ಕೈಬಿಡಬೇಕು, ಕಂದಾಯ ಇಲಾಖೆಗೆ ಎನ್‌ಓಸಿ ನೀಡಬೇಕು, ಬೆಳಕವಾಡಿ ಸರ್ವೆ ನಂ.415ರಲ್ಲಿ ಎನ್.ಎಚ್ 209 ರಸ್ತೆ ಉದ್ದೇಶಕ್ಕಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡಬೇಕು, ಬರ, ನೆರೆ ಬಿರುಗಾಳಿ ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದರು.
ಪೋಡಿಮುಕ್ತ ಮಾಡಿ: ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಸಾವಿರಾರು ಎಕರೆ ಜಮೀನು ದುರಸ್ತಿಯಾಗದೇ ಅಣ್ಣತಮ್ಮಂದಿರು ವಿಭಾಗ ಮಾಡಿ ಕೊಳ್ಳಲು, ಮಾರಾಟ ಮಾಡಲಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ತಾಲೂಕನ್ನು ಸಂಪೂರ್ಣ ಪೋಡಿಮುಕ್ತವನ್ನಾಗಿ ಮಾಡಬೇಕು, ಕಾಡಂಚಿನ ಪ್ರದೇಶದಲ್ಲಿ ಆನೆ, ಹಂದಿ, ಚಿರತೆ ದಾಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಗತ್ಯ ವಾಚರ್‌ಗಳ ನೇಮಿಸಬೇಬೇಕೆಂದು ಹೇಳಿದರು.
ಕೆರೆಗಳ ಪುನಃಶ್ಚೇತನಗೊಳಿಸಿ: ಬರಗಾಲ ಹಿನ್ನೆಲೆಯಲ್ಲಿ ಪಡಿತರ ಹೆಚ್ಚಳ, ಜನ ಜಾನುವಾರುಗಳಿಗೆ ನೆರವು, ಮೇವು ಒದಗಿಸಬೇಕು, ಬರಗಾಲ ಪರಿಹಾರ ಕ್ರಮಗಳಾದ ಅಂತರ್ಜಲ ಹೆಚ್ಚಳ, ಬಾವಿ, ನದಿ, ಕೆರೆ ಕಟ್ಟೆಗಳ ಪುನಃಶ್ಚೇತನಕ್ಕೆ ಆಗತ್ಯ ಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ ಕನಿಷ್ಠ 300 ದಿನ ಕೆಲಸ ಹಾಗೂ ದಿನಕ್ಕೆ ಕನಿಷ್ಠ 600 ರೂ. ಕೂಲಿ ನಿಗದಿ ಗೋಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಎನ್. ಲಿಂಗರಾಜು ಮೂರ್ತಿ, ಜವರೇಗೌಡ, ಮಹದೇವಸ್ವಾಮಿ, ಮಂಜುಳ, ಜಯಮ್ಮ, ಬಸವಣ್ಣ, ಗುರುಸ್ವಾಮಿ, ಶಂಕರ್, ಶಿವಕುಮಾರ್, ಮಹದೇವು , ರಾಮಕೃಷ್ಣ, ಬಸವರಾಜು, ಚನ್ನಕೇಶವ, ಪರಶುರಾಮ ಮೊದಲಾದವರು ಉಪಸ್ಥಿತರಿದ್ದರು.