ಹುಣಸೂರು: ಹುಣಸೂರು ನಗರಸಭೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿತ್ತಿರುವ ನೌಕರರು ಕಳೆದ 3 ತಿಂಗಳಿಂದ ಟೆಂಡರ್‌ದಾರ ಸಂಬಳ ನೀಡಿಲ್ಲವೆಂದು ಆರೋಪಿಸಿ ನೌಕರರು ಕೆಲ ನಗರಸಭಾ ಸದಸ್ಯರ ಬೆಂಬಲದೊಂದಿಗೆ ನಗರಸಭೆ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಹೊರಗುತ್ತಿಗೆ ನೌಕರ ಮಂಜುನಾಥ್ ಮಾತನಾಡಿ ಹೊರಗುತ್ತಿಗೆ ಆಧಾರದ ಕೆಲಸಗಾರರು ನಾವು ಒಟ್ಟು 40 ಜನ ನಗರಸಭೆ ಕಛೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಹತ್ತು ವರ್ಷ ಗಳಿಂದಲೂ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ ಕಳೆದ ಮೂರು ತಿಂಗಳಿಂದಲೂ ಟೆಂಡರ್‌ದಾರ ವೇತನ ನೀಡಿಲ್ಲ ಹಾಗೂ ಪ್ರಶ್ನಿಸಲು ಕರೆಯನ್ನೇ ಸ್ವೀಕರಿಸುವುದೂ ಇಲ್ಲ, ಕಳೆದ ಎಂಟು ವರ್ಷಗಳಿಂದಲೂ ನಮ್ಮ ಇ.ಎಸ್.ಐ ಹಾಗೂ ಪಿ.ಎಫ್.ಸೌಲಭ್ಯ ನೀಡಿಲ್ಲ. ಈ ಸಂಬಂಧ ಟೆಂಡರ್‌ದಾರರಿಗೆ ಕರೆ ಮಾಡಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲಾ. ಬಾಕಿ ಇರುವ ಮೂರು ತಿಂಗಳ ವೇತನ ನೀಡುವವರೆಗೂ ಹಾಗೂ 8 ವರ್ಷಗಳ ಇ.ಎಸ್.ಐ ಹಾಗೂ ಪಿ.ಎಫ್ ಸೌಲಭ್ಯ ತೀರ್ಮಾನವಾಗುವವರೆಗೂ ಕೆಲಸ ಸ್ಥಗಿತಗೊಳಿಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ನಗರಸಭೆಯಲ್ಲಿ ಬಾಕಿ ಇಲ್ಲ:
ಪೌರಾಯುಕ್ತ ರಮೇಶ್ ಪತ್ರಿಕೆಯೊಂದಿಗೆ ಮಾತನಾಡಿ ಗುತ್ತಿಗೆದಾರ ನಮಗೆ ನೀಡಿರುವ ಬಿಲ್ ಪಾವತಿಸಿದ್ದೇವೆ. ಗುತ್ತಿಗದಾರ ಅಕ್ಟೋಬರ್, ನವೆಂಬರ್ ತಿಂಗಳ ಬಿಲ್ ನಮಗೆ ಇನ್ನು ತಲುಪಿಸಿಲ್ಲ. ಅವರು ಬಿಲ್ ನೀಡಿದರೆ ನಾವು ತಕ್ಷಣವೇ ಪಾವತಿಸುತ್ತೇವೆ ಎಂದರು.
ಈ ವೇಳೆ ಹೊರಗುತ್ತಿಗೆ ಸಿಬ್ಬಂದಿಗಳಾದ ಮಂಜುನಾಥ್, ರೇವಣ್ಣ, ಸುಬ್ರಹಮಣಿ, ಮಧುಸೂಧನ್, ಸಂತೋಷ್, ರವಿ, ರಾಮು, ಎಚ್.ಆರ್.ಮುರುಗೇಶ್, ವಸಂತ್ ಭಾಗವಹಿಸಿದ್ದರು. ನಗರಸಭಾ ಸದಸ್ಯರಾದ ಸತೀಶ್, ಸ್ವಾಮೀಗೌಡ, ರಮೇಶ್, ದೇವರಾಜ್, ವಿವೇಕ್, ಮನು, ಕೃಷ್ಣ, ಮುಖಂಡರಾದ ಪೆರುಮಾಳ್, ಜಾಕೀರ್, ಸಿರಾಜ್ ಮತ್ತಿತರರು ಸಿಬ್ಬಂದಿಗಳ ಪ್ರತಿಭಟನೆಯನ್ನು ಬೆಂಬಲಿಸಿದರು.